ಲಂಡನ್:ಪೂರ್ವ ಲಂಡನ್‌ನಲ್ಲಿ ಕತ್ತಿ ಹಿಡಿದು ಸಾರ್ವಜನಿಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ವ್ಯಕ್ತಿಯೋರ್ವ ದಾಳಿ ಮಾಡಿದ್ದಾನೆ. ಇದರಲ್ಲಿ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈನಾಲ್ಟ್‌ನಲ್ಲಿ 36 ವರ್ಷದ ಕತ್ತಿ ಹಿಡಿದ ವ್ಯಕ್ತಿಯೊಬ್ಬ ಮನೆಗೆ ವಾಹನವನ್ನು ನುಗ್ಗಿಸಿದ್ದಾನೆ. ನಂತರ ಸಮೀಪದ ಟ್ಯೂಬ್ ಸ್ಟೇಷನ್ ಬಳಿ ಕತ್ತಿ ಹಿಡಿದು ದಾಳಿ ಮಾಡಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಜನರು ಗಾಯಗೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಪ್ರತಿಕ್ರಿಯಿಸಿ, ''ಇದೊಂದು ಆಘಾತಕಾರಿ ಘಟನೆ. ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇರುತ್ತವೆ. ಇದೇ ವೇಳೆ, ಘಟನೆಯಲ್ಲಿ ಪೊಲೀಸರು ತೋರಿದ ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸಲು ಬಯಸುತ್ತೇನೆ. ನಮ್ಮ ಬೀದಿಗಳಲ್ಲಿ ಇಂತಹ ಹಿಂಸಾಚಾರಕ್ಕೆ ಸ್ಥಾನವಿಲ್ಲ'' ಎಂದು ಹೇಳಿದ್ದಾರೆ.
ಘಟನೆಯು ಭಯೋತ್ಪಾದನೆಗೆ ಸಂಬಂಧಿಸಿದೆ ಎಂದು ತೋರುತ್ತಿಲ್ಲ. ಘಟನಾ ಸ್ಥಳದಲ್ಲಿ ಚಿಕಿತ್ಸೆ ನೀಡಿದ ನಂತರ ಐವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಜನರಿಗೆ ಇದೊಂದು ಭಯಾನಕ ಘಟನೆಯಾಗಿದ್ದು, ಆಘಾತ ಮತ್ತು ಆತಂಕಗೊಂಡಿದ್ದಾರೆ ಎಂದು ನಮಗೆ ತಿಳಿದಿದೆ. ಒಟ್ಟಾರೆ, ಘಟನೆ ಏನಾಯಿತು ಎಂಬುವುದರ ಬಗ್ಗೆ ನಾವು ಸಾಧ್ಯವಾದಷ್ಟು ಬೇಗ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ ಎಂದು ಮೆಟ್ ಪೊಲೀಸ್ ಉಪ ಸಹಾಯಕ ಆಯುಕ್ತ ಅಡೇ ಅಡೆಲೆಕನ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೌಟುಂಬಿಕ ದೌರ್ಜನ್ಯ 'ರಾಷ್ಟ್ರೀಯ ಬಿಕ್ಕಟ್ಟು' ಎಂದ ಆಸ್ಟ್ರೇಲಿಯಾ ಪ್ರಧಾನಿ ಅಲ್ಭನೀಸ್ - Domestic Violence