ಟೆಹರಾನ್(ಇರಾನ್):ಸಿರಿಯಾದಲ್ಲಿರುವ ಇರಾನ್‌ನ ಕಾನ್ಸುಲೇಟ್ ಮೇಲೆ ಇಸ್ರೇಲ್ ನಡಸಿದೆ ಎನ್ನಲಾದ ದಾಳಿಯು ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ. ಇಸ್ರೇಲ್ ಮೇಲೆ ದಾಳಿ ಮಾಡಲು ಮುಂದಾಗಿರುವ ಇರಾನ್, ಅಮೆರಿಕಕ್ಕೆ ಇದರಿಂದ ದೂರ ಇರಲು ಸೂಚಿಸಿದೆ.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಇಬ್ಬರು ಜನರಲ್ಗಳು ಸೇರಿ 7 ಮಂದಿ ಸಾವಿಗೀಡಾಗಿದ್ದಾರೆ. ಇದು ಇರಾನ್ ಕಣ್ಣು ಕೆಂಪಾಗಿಸಿದೆ. ಇದರ ಬೆನ್ನಲ್ಲೇ 'ಉಗ್ರ' ಕ್ರಮಕ್ಕೆ ಮುಂದಾಗಿದ್ದು, ಇಸ್ರೇಲ್ ವಿರುದ್ಧ ಸೆಟೆದುನಿಂತಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕಕ್ಕೆ ತಕ್ಷಣಕ್ಕೆ ಎಚ್ಚರಿಕೆ ರವಾನಿಸಿದ್ದು, ಮುಂದಾಗುವ ಅನಾಹುತಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ಬೆಬನ್ಯಾಹು ಅವರ ಬಲೆಯಲ್ಲಿ ಸಿಲುಕಬೇಡಿ. ನೀವು ಹೊಡೆತ ತಿನ್ನುವ ಬದಲು ಆ ದೇಶದಿಂದ ದೂರುವಿರಿ ಇರಾನ್ ಅಧ್ಯಕ್ಷರ ರಾಜಕೀಯ ಸಹಾಯಕ ಮೊಹಮ್ಮದ್ ಜಾವೇದ್ ಅಲಿ ಲಾರಿಜಾನಿ ತಿಳಿಸಿದ್ದಾರೆ. ಇಸ್ರೇಲ್ ಈ ವೈಮಾನಿಕ ದಾಳಿ ನಡೆಸಿದೆ ಎಂದು ಆರೋಪಿಸಿರುವ ಇರಾನ್, ಇದರಲ್ಲಿ ನಮ್ಮ ಇಬ್ಬರು ಜನರಲ್ಗಳ ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಎರಡೂ ದೇಶಗಳ ನಡುವೆ ಹಳೆ ವೈಷಮ್ಯ ಸುಳಿದಾಡುತ್ತಿದ್ದು, ಇದೀಗ ನಡೆದ ದಾಳಿಯು ತೀವ್ರತೆ ಹೆಚ್ಚಿಸಿದೆ.
ಅಮೆರಿಕ ಹೇಳೋದೇನು?:ಸಿರಿಯಾದಲ್ಲಿನ ಇರಾನ್ ಕಾನ್ಸುಲೇಟ್ ಕಟ್ಟಡವನ್ನು ನಾಶಪಡಿಸಿದ ವೈಮಾನಿಕ ದಾಳಿಯ ನಂತರ ಅಮೆರಿಕ, ಇರಾನ್‌ಗೆ ತುರ್ತು ಸಂದೇಶವನ್ನು ರವಾನಿಸಿತ್ತು. ಈ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕೃತವಾಗಿ ತಿಳಿಸಿತ್ತು.