ಕೊಲಂಬೊ(ಶ್ರೀಲಂಕಾ):ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಅಧಿಕಾರ ಬಯಸಿ ಸ್ಪರ್ಧಿಸಿರುವ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಳೀಯ ಚುನಾವಣೆಗಳನ್ನು ಒಂದು ವರ್ಷಕ್ಕೂ ಅಧಿಕ ಮುಂದೂಡಿದ್ದನ್ನು ಅಲ್ಲಿನ ಸುಪ್ರೀಂ ಕೋರ್ಟ್ ಟೀಕಿಸಿದೆ. ಜೊತೆಗೆ, ಇದಕ್ಕೆ ಅಧ್ಯಕ್ಷ ವಿಕ್ರಮಸಿಂಘೆ ಅವರೆ ನೇರ ಕಾರಣ ಎಂದಿದೆ.
ಸ್ಥಳೀಯ ಚುನಾವಣೆಗಳನ್ನು ಮುಂದೂಡಿದ್ದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ಹಾಲಿ ಅಧ್ಯಕ್ಷರನ್ನು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಳಿದೆ. ದೇಶದ ಆಡಳಿತ ವಿಭಾಗಗಳಿಗೆ ನಡೆಯಬೇಕಿದ್ದ ಚುನಾವಣೆಗಳನ್ನು ತಪ್ಪಿಸಿದ್ದು ಕಾನೂನುಬಾಹಿರ ನಡೆ. ಅಧ್ಯಕ್ಷರಾಗಿರುವ ವಿಕ್ರಮಸಿಂಘೆ ಅವರೆ ಇದಕ್ಕೆ ಕಾರಣ ಎಂದು ಹೇಳಿದೆ. ಹಾಲಿ ಅಧ್ಯಕ್ಷರಾಗಿರುವ ಕಾರಣ ಅವರಿಗೆ ಯಾವುದೇ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆ ಬಳಿಕ ಕ್ರಮವಾಗಲಿದೆ.
ಹಾಲಿ ಅಧ್ಯಕ್ಷರ ವೈಫಲ್ಯತೆ:ಹಾಲಿ ಅಧ್ಯಕ್ಷ ರನಿಲ್ ಅವರು, ಅಧಿಕಾರದಾಹದಿಂದ ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡಿದ್ದಾರೆ. ಆರ್ಥಿಕ ಸವಲತ್ತನ್ನು ಒದಗಿಸಲು ವಿಫಲವಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಗುರುವಾರ ಸರ್ವಾನುಮತದಿಂದ ಹೇಳಿದೆ.
ಸೆಪ್ಟೆಂಬರ್ 21ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು 2023 ರಲ್ಲೇ ಸ್ಥಳೀಯ ಚುನಾವಣೆಗಳು ನಡೆಯಬೇಕಿತ್ತು. ಹಣ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ವಿಕ್ರಮಸಿಂಘೆ ಅವರು ಚುನಾವಣೆಯನ್ನು ಮುಂದೂಡಿದ್ದಾರೆ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ವಿಕ್ರಮಸಿಂಘೆ ಬೇಕಂತಲೇ ಚುನಾವಣೆಗಳನ್ನು ನಡೆಸಿಲ್ಲ ಎಂದು ಕೋರ್ಟ್ ಹೇಳಿದೆ.