ಕೊಲಂಬೊ: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಬೆಂಬಲಿಸುವ ವಿಚಾರದಲ್ಲಿ ಶ್ರೀಲಂಕಾದ ಅತಿ ದೊಡ್ಡ ರಾಜಕೀಯ ಪಕ್ಷ ಇಬ್ಭಾಗವಾಗಿದೆ. ಪಕ್ಷದ 92 ಜನಪ್ರತಿನಿಧಿಗಳು ರನಿಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಪಕ್ಷವಾದ ಶ್ರೀಲಂಕಾ ಪೊಡುಜನ ಪೆರಮುನಾ (ಎಸ್ಎಲ್ಪಿಪಿ)ನ ಹೆಚ್ಚಿನ ಸಂಖ್ಯೆಯ ಸಂಸದರು ಸೆಪ್ಟೆಂಬರ್ 21ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಕ್ರಮಸಿಂಘೆ ಅವರ ಗೆಲುವಿಗೆ ಬೇಷರತ್ತಾಗಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಪ್ರಧಾನಿ ದಿನೇಶ್ ಗುಣವರ್ಧನೆ, ವಿದೇಶಾಂಗ ಸಚಿವ ಅಲಿ ಸಬ್ರಿ ಮತ್ತು ಹಲವಾರು ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯ ಸಚಿವರು ಸೇರಿದಂತೆ ಇನ್ನೂ ಅನೇಕರು ವಿಕ್ರಮಸಿಂಘೆ ಅವರನ್ನು ಬೆಂಬಲಿಸಿದ್ದಾರೆ. ದೇಶದಲ್ಲಿ 2022ರಲ್ಲಿ ಎದುರಾದ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಅದರ ನಂತರ ದೇಶಾದ್ಯಂತ ಆರಂಭವಾದ ಗಲಭೆಗಳ ನಂತರ ಆಗಿನ ಅಧ್ಯಕ್ಷ ಗೊಟಬಯ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿದಾಗ ಇವರೆಲ್ಲರೂ ವಿಕ್ರಮಸಿಂಘೆ ಜೊತೆ ಸೇರಿಕೊಂಡಿದ್ದರು. ದೇಶದಿಂದ ಹೊರಗಿದ್ದುಕೊಂಡೇ ಗೊಟಬಯ ಕೂಡ ವಿಕ್ರಮಸಿಂಘೆ ಅವರನ್ನು ಬೆಂಬಲಿಸಿದ್ದರು.
"ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ನಾಯಕತ್ವದಲ್ಲಿ, ಶ್ರೀಲಂಕಾ ಇತಿಹಾಸದಲ್ಲಿಯೇ ಅತ್ಯಂತ ತೀವ್ರವಾದ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಮತ್ತೆ ಇಂಥ ಬಿಕ್ಕಟ್ಟು ಮರುಕಳಿಸದಂತೆ ತಡೆಯಲು, ಅಧ್ಯಕ್ಷ ವಿಕ್ರಮಸಿಂಘೆ ಅವರ ದೃಷ್ಟಿಕೋನ ಮತ್ತು ಉಪಕ್ರಮಗಳನ್ನು ಬೆಂಬಲಿಸುವುದನ್ನು ಮುಂದುವರಿಸುವುದು ಅತ್ಯಗತ್ಯ. ನಮ್ಮ ರಾಜಕೀಯ ದೃಷ್ಟಿಕೋನಗಳಿಗಿಂತ ಮೊದಲು ನಾವು ದೇಶವನ್ನು ರಕ್ಷಿಸಬೇಕಾಗಿದೆ" ಎಂದು ವಿಕ್ರಮಸಿಂಘೆ ಅವರೊಂದಿಗೆ ಸೇರಿದ ಹಣಕಾಸು ರಾಜ್ಯ ಸಚಿವ ಸೆಹಾನ್ ಸೆಮಸಿಂಘೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.