ಸಿಂಗಾಪುರ್: ಸಿಂಗಾಪುರದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಕ್ಕೆ ಬೆದರಿಕೆ ಬಂದ ಬಳಿಕ ಮಂಗಳವಾರ ರಾತ್ರಿ ಮುಂಜಾಗ್ರತಾ ಕ್ರಮವಾಗಿ ವಿಮಾನಕ್ಕೆ ಬೆಂಗಾವಲಾಗಿ ಸಿಂಗಾಪುರ ವಾಯುಪಡೆ ಎಫ್- 15ಎಸ್ಜಿ ಜೆಟ್ ನಿಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಲ್ಲಿನ ರಕ್ಷಣಾ ಸಚಿವ ಎನ್ಜಿ ಇಂಗ್ ಹೆನ್, ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಆರ್ಎಸ್ಎಎಫ್ನ ಎರಡು ಯುದ್ಧ ವಿಮಾನಗಳನ್ನು ಅದರ ಬೆಂಗಾವಲಾಗಿ ನಿಯೋಜಿಸಲಾಗಿದೆ. ಅಂತಿಮವಾಗಿ ಇಂದು ರಾತ್ರಿ ಸುಮಾರು 10:04 ಗಂಟೆಗೆ ಸಿಂಗಪುರ್ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿಸಿದ್ದಾರೆ.
ಈ ವೇಳೆ, ನಮ್ಮ ಭೂ ಆಧಾರಿತ ವಾಯು ರಕ್ಷಣಾ ವ್ಯವಸ್ಥೆ ಮತ್ತು ಎಕ್ಸ್ಪ್ಲೊಸಿವ್ ಒರ್ಡನ್ಸ್ ಡಿಸ್ಪೋಸಲ್ ಕೂಡ ಸಕ್ರಿಯಗೊಳಿಸಲಾಗಿದೆ. ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ವಿಮಾನವನ್ನು ಏರ್ಪೋರ್ಟ್ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗುವುದು. ಸದ್ಯ ತನಿಖೆ ಮುಂದುವರೆದಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.