ನ್ಯೂಯಾರ್ಕ್: ಅಮೆರಿಕದಲ್ಲಿ ಖಲಿಸ್ತಾನಿ ನಾಯಕನನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಭಾರತೀಯ ಉದ್ಯಮಿ ನಿಖಿಲ್ ಗುಪ್ತಾ ಸೋಮವಾರ ಇಲ್ಲಿನ ಫೆಡರಲ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ತಮ್ಮ ವಕೀಲರ ಮೂಲಕ ತಾನು ನಿರ್ದೋಷಿ ಎಂದು ನಿಖಿಲ್ ಮನವಿ ಹೇಳಿಕೊಂಡಿದ್ದಾರೆ.
ಕಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಅವರ ಹತ್ಯೆಯ ಸಂಚಿನಲ್ಲಿ ಈತ ಭಾಗಿಯಾಗಿದ್ದ ಎನ್ನುವ ಆರೋಪಗಳಿವೆ. ವಿಚಾರಣೆ ನಡೆಸಿದ ಸದರ್ನ್ ನ್ಯೂಯಾರ್ಕ್‌ನ ಫೆಡರಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜೇಮ್ಸ್ ಕೋಟ್ ಅವರು, ಜೂನ್ 28ಕ್ಕೆ ವಿಚಾರಣೆಯನ್ನು ಮುಂದೂಡಿ, ಗುಪ್ತಾನನ್ನು ಕಸ್ಟಡಿಯಲ್ಲಿರಿಸುವಂತೆ ಆದೇಶಿಸಿದರು.
ಆದರೆ, ಈ ವೇಳೆ ಗುಪ್ತಾ ಪರ ವಕೀಲ ಜೆಫ್ರಿ ಚಾಬ್ರೋವ್ ಅವರು ಜಾಮೀನಿಗೆ ಯಾವುದೇ ಅರ್ಜಿ ಸಲ್ಲಿಸಲಿಲ್ಲ. ನ್ಯಾಯಾಲಯದ ಹೊರಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಚಾರ್ಬ್ರೋವ್, "ಇದು ಭಾರತ ಮತ್ತು ಯುಎಸ್ಗೆ 'ಸಂಕೀರ್ಣ ವಿಷಯ' ಮತ್ತು ತೀರ್ಪಿಗಾಗಿ ಯಾವುದೇ ಆತುರ ಇಲ್ಲ" ಎಂದು ಹೇಳಿದರು.