ನವದೆಹಲಿ: ಯುಪಿಐ ವ್ಯವಸ್ಥೆಯನ್ನು ಜಾಗತಿಕ ಪಾವತಿ ವೇದಿಕೆಯಾಗಿಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ದೊಡ್ಡದೊಂದು ಯಶಸ್ಸು ಸಿಕ್ಕಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿನ ಕೆಲ ಪ್ರಮುಖ ವ್ಯಾಪಾರಿ ಕಂಪನಿಗಳು ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಯುಪಿಐ ಮೂಲಕ ಭಾರತದ ರೂಪಾಯಿಗಳಲ್ಲೇ ಪೇಮೆಂಟ್ಗಳನ್ನು ಸ್ವೀಕರಿಸಲು ಆರಂಭಿಸಿವೆ.
ಯುಎಇಯ ಅತಿದೊಡ್ಡ ರಿಟೇಲ್ ವ್ಯಾಪಾರ ಮಳಿಗೆಗಳಲ್ಲಿ ಒಂದಾದ ಒಂದಾದ ಲುಲು ದೇಶದ ತನ್ನ ಎಲ್ಲಾ ಮಳಿಗೆಗಳಲ್ಲಿ ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲು ಪ್ರಾರಂಭಿಸಿದೆ.
ಭಾರತೀಯ ನಾಗರಿಕರು ಭಾರತದಲ್ಲಿರುವಂತೆಯೇ ಯುಪಿಐ ಅಪ್ಲಿಕೇಶನ್ ಬಳಸಿ ಸುಲಭವಾಗಿ ಪಾವತಿ ಮಾಡಬಹುದು. ಪಾವತಿಸಿದ ಮೊತ್ತವನ್ನು ಭಾರತದಲ್ಲಿನ ಅವರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಈ ಮೂಲಕ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಯುಪಿಐ ಮೂಲಕ ಯುಎಇಯಲ್ಲಿ ಭಾರತೀಯ ರೂಪಾಯಿಗಳನ್ನು ಬಳಸಿ ಸುಲಭವಾಗಿ ಶಾಪಿಂಗ್ ಮಾಡಬಹುದು.
ಜುಲೈ ಆರಂಭದಲ್ಲಿ ಯುಪಿಐ ಪಾವತಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಯುಎಇಯಲ್ಲಿ ಪ್ರಾರಂಭಿಸಲಾಗಿದೆ. ಲುಲು ಮಾತ್ರವಲ್ಲದೆ ಯುಎಇಯಾದ್ಯಂತದ ಅನೇಕ ದೊಡ್ಡ ಮತ್ತು ಸಣ್ಣ ವ್ಯಾಪಾರಿ ಸಂಸ್ಥೆಗಳು ಈಗ ಯುಪಿಐ ಮೂಲಕ ಹಣ ಸ್ವೀಕರಿಸುತ್ತಿವೆ. ಯುಎಇಯಲ್ಲಿರುವ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ಸುಲಭವಾಗಿ ಪಾವತಿಸಬಹುದು.