Wildfire: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಟ್ಟ ಹವಾಮಾನದಿಂದಾಗಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಿದೆ. ಮಾಲಿಬುವಿ ಎಂಬಲ್ಲಿನ ಉತ್ತರದ ಬೆಟ್ಟಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿರುವ ಮನೆಗಳಿಗೆ ವಿನಾಶದ ಬೆದರಿಕೆ ಉಂಟಾಗಿದೆ. ಪಾಲಿಸೇಡ್ಸ್ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಬೀಸುತ್ತಿರುವ ಬಲವಾದ ಗಾಳಿ ನಿಲ್ಲದೇ ಇದ್ದರೆ ಕಾಡ್ಗಿಚ್ಚು ಇನ್ನಷ್ಟು ಅಪಾಯಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.
70 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ: ತುರ್ತು ರಕ್ಷಣಾ ಸಿಬ್ಬಂದಿ ಕಾಡ್ಗಿಚ್ಚು ಬಾಧಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದ 70 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಸಾವಿರಾರು ಕಟ್ಟಡಗಳು ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಹೋಗಿವೆ. ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆ ಈಗಾಗಲೇ ಕಾಡ್ಗಿಚ್ಚುಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಸ್ಟ್ರೈಕ್ ಟೀಂಗಳನ್ನು ನಿಯೋಜಿಸಿದೆ. ಅಗ್ನಿಶಾಮಕ ದಳದ ನಿರಂತರವಾಗಿ ಬೆಂಕಿ ನಂದಿಸುವಲ್ಲಿ ಸಕ್ರಿಯವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಕಾಡ್ಗಿಚ್ಚಿಗೆ ಕಾರಣವೇನು?: ಕಡಿಮೆ ಆರ್ದ್ರತೆ ಮತ್ತು ನಿರಂತರ ಬರ ಪರಿಸ್ಥಿತಿಗಳು ಪಾಲಿಸೇಡ್ಸ್ ಕಾಡ್ಗಿಚ್ಚಿಗೆ ಕಾರಣವೆಂದು ಹೇಳಲಾಗುತ್ತಿದೆ. ಬಲವಾಗಿ ಬೀಸುವ ಸಾಂತಾ ಅನಾ ಗಾಳಿ ಬೆಂಕಿ ವೇಗವಾಗಿ ವ್ಯಾಪಿಸಲು ಕಾರಣವಾಗುತ್ತಿದೆ. ಸದ್ಯ ಗಾಳಿಯ ವೇಗ ಗಂಟೆಗೆ 80 ಮೈಲುಗಳಷ್ಟಿದೆ. ವರದಿಗಳ ಪ್ರಕಾರ, ಪಾಲಿಸೇಡ್ಸ್ ಕಾಡ್ಗಿಚ್ಚು ಮಂಗಳವಾರ ಬೆಳಿಗ್ಗೆ 10:30ರ ಸುಮಾರಿಗೆ ನಾರ್ತ್ ಪಿಯೆಡ್ರಾ ಮೊರಾಡಾ ಡ್ರೈವ್‌ನಲ್ಲಿ ಮೊದಲು ವರದಿಯಾಗಿತ್ತು. ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ಮಧ್ಯಾಹ್ನದ ವೇಳೆಗೆ ಜೋರಾಗಿ ಗಾಳಿ ಬೀಸಿದ್ದರಿಂದ ಬೆಂಕಿ 200 ಎಕರೆಗೂ ಹೆಚ್ಚು ಪ್ರದೇಶಕ್ಕೆ ಹರಡಿದೆ.
ಸಮರೋಪಾದಿಯಲ್ಲಿ ಸ್ಥಳಾಂತರ ಕಾರ್ಯ: ಜನರನ್ನು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಬೀದಿಗಳಲ್ಲಿ ಆಸ್ಪತ್ರೆಯ ಹಾಸಿಗೆಗಳು, ವೀಲ್‌ಚೇರ್‌ಗಳು ಮತ್ತು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಇರುವ ವಿಡಿಯೋ ವೈರಲ್ ಆಗುತ್ತಿದೆ.
ಜನರನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅಧಿಕಾರಿಗಳು ಜನರನ್ನು ಸ್ಥಳಂತರಿಸಲು ಸಾಮಾನ್ಯವಾಗಿ ಬಳಸುವ ಸೇನೆಯ ಶಸ್ತ್ರಸಜ್ಜಿತ ವಾಹನಗಳೂ ಸೇರಿದಂತೆ ಇತರೆ ವಾಹನಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2 ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ: ಲಾಸ್ ಏಂಜಲೀಸ್ ಕೌಂಟಿಯಲ್ಲಿ ವಿದ್ಯುತ್ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೇ ಜನರು ಕಂಗಾಲಾಗಿದ್ದಾರೆ. ವಿದ್ಯುತ್ ಕಡಿತ ಟ್ರ್ಯಾಕಿಂಗ್ ವೆಬ್‌ಸೈಟ್ PowerOutage.us ಪ್ರಕಾರ, ಸುಮಾರು 2 ಲಕ್ಷಕ್ಕೂ ಅಧಿಕ ಜನರ ಮೇಲೆ ತೀವ್ರ ಪರಿಣಾಮವಾಗಿದೆ.
ನೆರೆಯ ಸ್ಯಾನ್ ಬರ್ನಾರ್ಡಿನೊ ಕೌಂಟಿಯಲ್ಲಿ ನಿವಾಸಿಗಳು ಸಾಂತಾ ಅನಾ ಗಾಳಿಯಿಂದ ತತ್ತರಿಸಿದ್ದಾರೆ. ಇಲ್ಲಿ ಸುಮಾರು 13,600 ನಿವಾಸಿಗಳ ಮೇಲೆ ವಿದ್ಯುತ್ ಕಡಿತ ಪ್ರಭಾವ ಬೀರಿದೆ. ರಾತ್ರಿಯಿಡೀ ಬಲವಾದ ಗಾಳಿ ಬೀಸಿದರೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುವ ಸಾಧ್ಯತೆ ಹೆಚ್ಚಾಗಿದೆ. ಪರಿಣಾಮ, ರಸ್ತೆ ಮಾರ್ಗಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಟೆಬೆಟ್ನಲ್ಲಿ ಪ್ರಬಲ ಭೂಕಂಪನ: ಸಾವಿನ ಸಂಖ್ಯೆ 95ಕ್ಕೆ ಏರಿಕೆ; ದೆಹಲಿ, ಬಿಹಾರದಲ್ಲೂ ನಡುಗಿದ ಭೂಮಿ