ಕರ್ನಾಟಕ

karnataka

ETV Bharat / international

ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್​​ ದಾಳಿ: 5 ಚೀನೀಯರು ಸೇರಿ 6 ಮಂದಿ ದುರ್ಮರಣ - suicide attack in pakistan - SUICIDE ATTACK IN PAKISTAN

ಪಾಕಿಸ್ತಾನದಲ್ಲಿ ಮತ್ತೊಂದು ಆತ್ಮಹತ್ಯಾ ಬಾಂಬ್​ ದಾಳಿ ನಡೆದಿದೆ. ಚೀನೀ ನಾಗರಿಕರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ.

ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್​​ ದಾಳಿ
ಪಾಕಿಸ್ತಾನದಲ್ಲಿ ಆತ್ಮಹತ್ಯಾ ಬಾಂಬರ್​​ ದಾಳಿ

By ETV Bharat Karnataka Team

Published : Mar 26, 2024, 8:02 PM IST

ಇಸ್ಲಾಮಾಬಾದ್ (ಪಾಕಿಸ್ತಾನ):ಭಯೋತ್ಪಾದಕ ದಾಳಿಗಳಿಗೆ ತುತ್ತಾಗಿ ಜರ್ಝರಿತವಾಗಿರುವ ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುಂಖ್ವಾದಲ್ಲಿ ಮಂಗಳವಾರ ಮತ್ತೊಂದು ಸ್ಫೋಟ ಸಂಭವಿಸಿದ್ದು, ಐವರು ಚೀನಿಯರು ಸೇರಿ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಚೀನೀಯರು ದಾಸು ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಂತ್ಯದ ಶಾಂಗ್ಲಾ ಜಿಲ್ಲೆಯ ಬಿಶಮ್ ಪ್ರದೇಶದಲ್ಲಿ ಇಸ್ಲಾಮಾಬಾದ್‌ನಿಂದ ಕೊಹಿಸ್ತಾನ್‌ಗೆ ತೆರಳುತ್ತಿದ್ದ ಬಸ್‌ಗೆ ವಿರುದ್ಧ ದಿಕ್ಕಿನಿಂದ ಸ್ಫೋಟಕ ತುಂಬಿಕೊಂಡು ಬಂದ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಸ್ಫೋಟ ಸಂಭವಿಸಿ ದುರಂತ ಸಂಭವಿಸಿದೆ.

ಘಟನೆ ಮತ್ತು ಸಾವಿನ ಪ್ರಮಾಣದ ಆಧಾರದ ಮೇಲೆ ಮೇಲ್ನೋಟಕ್ಕೆ ಇದು ಆತ್ಮಾಹುತಿ ದಾಳಿ ಎಂದು ಹೇಳಲಾಗಿದೆ. ದಾಳಿಯಲ್ಲಿ ಐವರು ಚೀನಾದ ಪ್ರಜೆಗಳು ಮತ್ತು ಪಾಕಿಸ್ತಾನಿ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ - ಪಾಕ್​ ಸಂಬಂಧ ಹಾಳು ಮಾಡಲು ಯತ್ನ:ಸಚಿವ ಮೊಹ್ಸಿನ್ ನಖ್ವಿ ಇಲ್ಲಿನ ಚೀನಾ ರಾಯಭಾರ ಕಚೇರಿಗೆ ಧಾವಿಸಿ ಜಿಯಾಂಗ್ ಜೈಡಾಂಗ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಸಂತಾಪ ಸೂಚಿಸಿದರು. ಸರ್ಕಾರ ಆಗಂತುಕರನ್ನು ಶೀಘ್ರವೇ ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ದಾಳಿಯನ್ನು ಬಲವಾಗಿ ಖಂಡಿಸಿದ್ದು, ಚೀನಾ ಪ್ರಜೆಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪಾಕ್ - ಚೀನಾ ಸ್ನೇಹವನ್ನು ಹಾಳು ಮಾಡುವಲ್ಲಿ ಪಾಕಿಸ್ತಾನ ವಿರೋಧಿಗಳು ನಡೆಸಿರುವ ಕೃತ್ಯ ಇದಾಗಿದೆ. ಆದರೆ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳ ಅಧಿಕಾರಿಗಳು ದಾಳಿ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಮೃತ ದೇಹಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆತ್ಮಹತ್ಯಾ ಬಾಂಬರ್‌ ವಾಹನ ಎಲ್ಲಿಂದ ಮತ್ತು ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಅಂದರೆ 2021 ರಲ್ಲಿ ಇಂಥದ್ದೇ ದಾಳಿ ನಡೆದು 9 ಚೀನೀಯರು ಸೇರಿ 13 ಮಂದಿ ಸಾವಿಗೀಡಾಗಿದ್ದರು. ಡ್ರ್ಯಾಗನ್​ ರಾಷ್ಟ್ರ ಮತ್ತು ಪಾಕ್​ ಸಹಯೋಗದಲ್ಲಿ ಇಲ್ಲಿ ನಡೆಯುತ್ತಿರುವ ಆರ್ಥಿಕ ಕಾರಿಡಾರ್​ನ ಯೋಜನೆಯಲ್ಲಿ ಮೃತರು ಕೆಲಸದಲ್ಲಿ ನಿಯೋಜಿತರಾಗಿದ್ದರು.

ಉಗ್ರ ದಾಳಿಗೆ ಚೀನಾ ಖಂಡನೆ:ಉಗ್ರ ದಾಳಿಯನ್ನು ಚೀನಾ ಖಂಡಿಸಿದ್ದು, ತನ್ನ ನಾಗರಿಕರ ಸಾವಿಗೆ ಸಂತಾಪ ಸೂಚಿಸಿದೆ. ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ದುಃಖಿತ ಕುಟುಂಬಗಳ ಜೊತೆ ನಾವಿದ್ದೇವೆ. ಪ್ರಕರಣದ ಬಗ್ಗೆ ಪಾಕ್​ ಸರ್ಕಾರ ಕ್ರಮ ಕೈಗೊಳ್ಳಲು ನೆರವು ನೀಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ನುಗ್ಗಿ ಸೇಡು ತೀರಿಸಿಕೊಳ್ಳುವಂತೆ ಟಿಟಿಪಿ ಉಗ್ರರಿಗೆ ತಾಲಿಬಾನ್ ಕಮಾಂಡರ್ ಕರೆ - Tehreek e Taliban

ABOUT THE AUTHOR

...view details