ನವದೆಹಲಿ/ಇಸ್ಲಾಮಾಬಾದ್:ಥೈಲ್ಯಾಂಡ್‌ನಿಂದ ಮಾಸ್ಕೋಗೆ ಆರು ಜನರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಿಮಾನವು ಅಫ್ಘಾನಿಸ್ತಾನದಲ್ಲಿ ಪತನವಾಗಿದೆ. ಈ ವಿಮಾನವು ಭಾರತದ ಗಯಾದಿಂದ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್, ಮಾಸ್ಕೋದ ಝುಕೊವ್ಸ್ಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಚಾರ್ಟರ್ ಆಂಬ್ಯುಲೆನ್ಸ್ ವಿಮಾನದಂತೆ ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದ ಜೆಬಾಕ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಶನಿವಾರ ವಿಮಾನ ಪತನವಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡವನ್ನು ರವಾನಿಸಲಾಗಿದೆ ಎಂದು ಪ್ರಾದೇಶಿಕ ವಕ್ತಾರ ಜಬಿವುಲ್ಲಾ ಅಮಿರಿ ತಿಳಿಸಿದ್ದಾರೆ. ಬಡಾಕ್ಷಣ್ ಪೊಲೀಸ್ ಮುಖ್ಯಸ್ಥರ ಕಚೇರಿ ಕೂಡ ಈ ಘಟನೆಯನ್ನು ದೃಢಪಡಿಸಿದೆ.
ಮತ್ತೊಂದೆಡೆ, ರಷ್ಯಾದ ನಾಗರಿಕ ವಿಮಾನಯಾನ ಅಧಿಕಾರಿಗಳು ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಇದು ಡಸಾಲ್ಟ್ ಫಾಲ್ಕನ್ 10 ವಿಮಾನವಾಗಿದ್ದು, ಇದರಲ್ಲಿ ನಾಲ್ಕು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರಿದ್ದರು. ಥಾಯ್ಲೆಂಡ್‌ನ ಯು-ತಪಾವೊ ರಾಯೊಂಗ್‌ಪಟ್ಟಾಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟ ಮಾಡುತ್ತಿತ್ತು. ಆದರೆ, ರಾಡಾರ್ ಪರದೆಗಳಿಂದ ಕಣ್ಮರೆಯಾಗಿ ವಿಮಾನವು ಸಂವಹನ ಕಡಿತವಾಗಿದೆ ಎಂದು ಹೇಳಿದ್ದಾರೆ.
ಗಯಾದಲ್ಲಿ ಇಂಧನ ತುಂಬಿಸಿಕೊಂಡಿದ್ದ ವಿಮಾನ: ಈ ಮೊದಲಿಗೆ ಪತನವಾದ ವಿಮಾನವನ್ನು ಭಾರತದ್ದು ಎಂದು ಹೇಳಲಾಗಿತ್ತು. ಆದರೆ, ಇದು ಭಾರತೀಯರಿದ್ದ ವಿಮಾನವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ. ಅಫ್ಘಾನಿಸ್ತಾನದಲ್ಲಿ ಪತನಗೊಂಡ ಸಣ್ಣ ವಿಮಾನವು ಯಾವುದೇ ಭಾರತೀಯರನ್ನು ಹೊತ್ತೊಯ್ಯುತ್ತಿರಲಿಲ್ಲ. ಈ ವಿಮಾನವು ಥೈಲ್ಯಾಂಡ್‌ನ ವಿಮಾನ ನಿಲ್ದಾಣದಿಂದ ಮಾಸ್ಕೋಗೆ ಹಾರಾಟ ಮಾಡುತ್ತಿದ್ದಾಗ ಗಯಾ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿತ್ತು ಎಂದು ಭಾರತ ಸರ್ಕಾರ ತಿಳಿಸಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ವಿಮಾನವು ಮೊರಾಕ್ಕೊದಲ್ಲಿ ನೋಂದಾಯಿಸಲಾದ ಡಿಎಫ್-10 (ಡಸಾಲ್ಟ್ ಫಾಲ್ಕನ್) ಸಣ್ಣ ವಿಮಾನವಾಗಿದೆ. ಇದು ಭಾರತೀಯ ವಿಮಾನವಲ್ಲ. ವಿಮಾನವು ಏರ್ ಆಂಬ್ಯುಲೆನ್ಸ್ ಆಗಿತ್ತು. ಥೈಲ್ಯಾಂಡ್‌ನಿಂದ ಮಾಸ್ಕೋಗೆ ಹಾರುತ್ತಿತ್ತು ಮತ್ತು ಗಯಾ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.