ಮಾಸ್ಕೊ: ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ರಷ್ಯಾ ಗುರುವಾರ ಬೆಳಗ್ಗೆ ಅಸ್ಟ್ರಾಖಾನ್ ಪ್ರದೇಶದಿಂದ ಉಕ್ರೇನ್ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಯನ್ನು ಉಡಾಯಿಸಿದೆ. 33 ತಿಂಗಳ ಸುದೀರ್ಘ ಯುದ್ಧದಲ್ಲಿ ರಷ್ಯಾ ಇಂಥ ಪ್ರಬಲ ಅಸ್ತ್ರವನ್ನು ಬಳಸಿರುವುದು ಇದೇ ಮೊದಲ ಬಾರಿ.
ಮಧ್ಯ-ಪೂರ್ವ ಉಕ್ರೇನಿಯನ್ ನಗರವಾದ ಡ್ನಿಪ್ರೊದಲ್ಲಿನ ಉದ್ಯಮಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಕ್ಷಿಪಣಿ ದಾಳಿಯಿಂದ ಎಷ್ಟು ಹಾನಿಯಾಗಿದೆ ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ.
ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ಮಾಸ್ಕೋ:ರಷ್ಯಾ ಒಕ್ಕೂಟದ ಅಸ್ಟ್ರಾಖಾನ್ ಪ್ರದೇಶದಿಂದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ. ಉಕ್ರೇನ್ನೊಳಗೆ ಹಾರಿಬಂದ ಕ್ಷಿಪಣಿ ಯಾವ ಪ್ರಕಾರದ್ದು ಎಂಬುದನ್ನು ವಾಯುಪಡೆ ನಿರ್ದಿಷ್ಟವಾಗಿ ಹೇಳಿಲ್ಲ. ಆದರೆ, ಆರು ಕೆಎಚ್ -101 ಕ್ರೂಸ್ ಕ್ಷಿಪಣಿಗಳನ್ನು ಸಹ ರಷ್ಯಾ ತನ್ನ ದೇಶದ ಮೇಲೆ ಉಡಾಯಿಸಿದೆ ಎಂದು ಅದು ಹೇಳಿದೆ. ಇವುಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲವನ್ನು ಉಕ್ರೇನ್ ವಾಯು ರಕ್ಷಣಾ ಪಡೆಗಳು ತಡೆದಿವೆ ಎಂದು ಸಿಎನ್ಎನ್ ವರದಿ ಮಾಡಿದೆ.
ಸಾಂಪ್ರದಾಯಿಕ ಮತ್ತು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಮತ್ತು ಹೈಪರ್ ಸಾನಿಕ್ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿರುವ ಆರ್ ಎಸ್ -26 ರುಬೆಜ್ ಕ್ಷಿಪಣಿಯನ್ನು ಮಾಸ್ಕೋ ಬಳಸಿರಬಹುದು ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಐಸಿಬಿಎಂಗಳು ಸಾಮಾನ್ಯವಾಗಿ 5,500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುತ್ತವೆ ಮತ್ತು ಪರಮಾಣು ಅಥವಾ ಸಾಂಪ್ರದಾಯಿಕ ಸಿಡಿತಲೆಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ.
ರಷ್ಯಾದೊಳಗೆ ನುಗ್ಗಿ ಉಕ್ರೇನ್ ಮಾಡಿದ ದಾಳಿಗೆ ಪ್ರತಿಯಾಗಿ ದಾಳಿ:ಉಕ್ರೇನ್ ಇತ್ತೀಚೆಗೆ ಯುಎಸ್ ನಿರ್ಮಿತ ಎಟಿಎಸಿಎಂಎಸ್ ಮತ್ತು ಬ್ರಿಟಿಷ್-ಫ್ರೆಂಚ್ ಸ್ಟಾರ್ಮ್ ಶಾಡೋ ಕ್ಷಿಪಣಿಗಳನ್ನು ರಷ್ಯಾದ ಭೂಪ್ರದೇಶದೊಳಗಿನ ಗುರಿಗಳ ಮೇಲೆ ದಾಳಿ ಮಾಡಲು ಬಳಸಿದ ನಂತರ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಉಕ್ರೇನ್ ದಾಳಿಗಳ ಬಗ್ಗೆ ಮಾಹಿತಿ ನೀಡಿದ ರಷ್ಯಾದ ರಕ್ಷಣಾ ಸಚಿವಾಲಯ, ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಎರಡು ಬ್ರಿಟಿಷ್ ನಿರ್ಮಿತ ಸ್ಟಾರ್ಮ್ ಶಾಡೋ ಕ್ಷಿಪಣಿಗಳು, ಆರು ಹಿಮಾರ್ಸ್ ರಾಕೆಟ್ ಗಳು ಮತ್ತು 67 ಡ್ರೋನ್ ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದೆ. ಉಕ್ರೇನ್ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ಸಚಿವಾಲಯದ ದೈನಂದಿನ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಉಕ್ರೇನ್ ಪಾಶ್ಚಿಮಾತ್ಯ ನಿರ್ಮಿತ ದೂರಗಾಮಿ ಕ್ಷಿಪಣಿಗಳನ್ನು ಬಳಸಿದಲ್ಲಿ ಅದನ್ನು ಯುದ್ಧ ಉದ್ವಿಗ್ನತೆಯಾಗಿ ಪರಿಗಣಿಸಲಾಗುವುದು ಎಂದು ಕ್ರೆಮ್ಲಿನ್ ಈ ಹಿಂದೆ ಎಚ್ಚರಿಸಿತ್ತು.
ಇದನ್ನೂ ಓದಿ :ಗಯಾನಾಗೆ ಬಂದ ಪ್ರಧಾನಿ ಮೋದಿಗೆ 'ಜಾರ್ಜ್ ಟೌನ್ ನಗರದ ಕೀಲಿ ಕೈ' ನೀಡಿ ಸ್ವಾಗತ