ಕರ್ನಾಟಕ

karnataka

ಬೇಹುಗಾರಿಕೆ ಆರೋಪ: ಆರು ಬ್ರಿಟಿಷ್​ ರಾಜತಾಂತ್ರಿಕರನ್ನು ಉಚ್ಚಾಟಿಸಿದ ರಷ್ಯಾ - Russia expels UK diplomats

By ETV Bharat Karnataka Team

Published : Sep 13, 2024, 4:15 PM IST

ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರಷ್ಯಾ 6 ಜನ ಬ್ರಿಟಿಷ್ ರಾಜತಾಂತ್ರಿಕರನ್ನು ಉಚ್ಚಾಟಿಸಿದೆ.

ರಷ್ಯಾದಲ್ಲಿರುವ ಯುಕೆ ಎಂಬೆಸಿ
ರಷ್ಯಾದಲ್ಲಿರುವ ಯುಕೆ ಎಂಬೆಸಿ (IANS)

ಮಾಸ್ಕೋ, ರಷ್ಯಾ: ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರು ಜನ ಬ್ರಿಟಿಷ್ ರಾಜತಾಂತ್ರಿಕರನ್ನು ರಷ್ಯಾ ಹೊರ ಹಾಕಿದೆ. ಈ ಮೂಲಕ ಮೊದಲೇ ಹದಗೆಟ್ಟಿರುವ ಮಾಸ್ಕೊ- ಯುಕೆ ಸಂಬಂಧಗಳು ಮತ್ತಷ್ಟು ಹಳಸಲಿವೆ. ಈ ರಾಜತಾಂತ್ರಿಕರು ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೇಶದ ಗುಪ್ತಚರ ಸಂಸ್ಥೆ ಎಫ್ಎಸ್​ಬಿ ಆರೋಪಿಸಿದೆ.

ಅಂತಾರಾಷ್ಟ್ರೀಯ ಮಿಲಿಟರಿ-ರಾಜಕೀಯ ಪರಿಸ್ಥಿತಿಗಳನ್ನು ಹದಗೆಡಿಸುವ ಪ್ರಯತ್ನಗಳಲ್ಲಿ ಲಂಡನ್​ನ ಕೈವಾಡವಿರುವ ದಾಖಲೆಗಳು ಲಭ್ಯವಾಗಿವೆ ಎಂದು ಎಫ್ಎಸ್​ಬಿ ಶುಕ್ರವಾರ ತಿಳಿಸಿದೆ.

ಬ್ರಿಟನ್​ ವಿರುದ್ಧ ರಷ್ಯಾ ಆರೋಪ:ರಷ್ಯಾಗೆ ಕಾರ್ಯತಂತ್ರದ ಸೋಲನ್ನು ಉಂಟುಮಾಡುವ ಪ್ರಯತ್ನವಾಗಿ ಯುಕೆ ರಷ್ಯಾದಲ್ಲಿ ವಿಧ್ವಂಸಕ ನೀತಿಗಳನ್ನು ಬೆಂಬಲಿಸಿದೆ ಮತ್ತು ಈ ಪ್ರಯತ್ನಗಳಿಗೆ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿಯ ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ ನಿರ್ದೇಶನಾಲಯ (ಇಇಸಿಎಡಿ)ವು ನೇತೃತ್ವ ವಹಿಸಿದೆ ಎಂದು ಸಂಸ್ಥೆ ಹೇಳಿದೆ. ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಇಇಸಿಎಡಿ ಮೂಲಭೂತವಾಗಿ ಮಾಸ್ಕೋ ವಿರುದ್ಧ ಕೆಲಸ ಮಾಡುವ ವಿಶೇಷ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಅದರ ಉದ್ಯೋಗಿಗಳು ರಷ್ಯಾದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು ಎಫ್​ಎಸ್​ಬಿ ಆರೋಪಿಸಿದೆ.

ಈ ವಿಚಾರ ಮತ್ತು ಯುಕೆಯ ಇತರ ಪ್ರತಿಕೂಲ ಕೃತ್ಯಗಳ ಕಾರಣಕ್ಕಾಗಿ ರಷ್ಯಾದ ವಿದೇಶಾಂಗ ಸಚಿವಾಲಯವು ಸಂಬಂಧಿತ ಇಲಾಖೆಗಳ ಸಹಕಾರದೊಂದಿಗೆ, ಮಾಸ್ಕೋದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯ ರಾಜಕೀಯ ವಿಭಾಗದ ಆರು ರಾಜತಾಂತ್ರಿಕರ ಮಾನ್ಯತೆಯನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಚ್ಛಾಟನೆಗೊಂಡ ರಾಜತಾಂತ್ರಿಕರು ಶೀಘ್ರವೇ ದೇಶ ಬಿಟ್ಟು ಹೊರಡಬೇಕು:ರಷ್ಯಾದಲ್ಲಿನ ಬ್ರಿಟಿಷ್ ರಾಜತಾಂತ್ರಿಕರು ನಮ್ಮ ಜನರಿಗೆ ಹಾನಿ ಮಾಡುವ ಕೃತ್ಯಗಳಲ್ಲಿ ಭಾಗಿಯಾಗಿರುವ ಎಫ್ಎಸ್​ಬಿಯ ಆರೋಪಗಳನ್ನು ತಾವು ಸಂಪೂರ್ಣವಾಗಿ ಬೆಂಬಲಿಸುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಖರೋವಾ ಹೇಳಿದ್ದಾರೆ. ಉಚ್ಚಾಟನೆಗೊಂಡ ರಾಜತಾಂತ್ರಿಕರು ಶೀಘ್ರವೇ ದೇಶ ಬಿಟ್ಟು ಹೊರಡಬೇಕೆಂದು ರಷ್ಯಾ ಸೂಚಿಸಿದೆ.

ಬ್ರಿಟಿಷ್ ಅಧಿಕಾರಿಗಳು ಈ ಆರೋಪಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಎರಡೂ ದೇಶಗಳು ನಿರಂತರವಾಗಿ ಪರಸ್ಪರ ರಾಜತಾಂತ್ರಿಕರನ್ನು ಹೊರಹಾಕಿದ್ದರಿಂದ ಮತ್ತು ನಿರ್ಬಂಧಗಳನ್ನು ವಿಧಿಸಿದ್ದರಿಂದ ರಷ್ಯಾ ಮತ್ತು ಯುಕೆ ನಡುವಿನ ಸಂಬಂಧಗಳು ಹಾಳಾಗಿವೆ.

ಯುರೋಪ್ ಮತ್ತು ಯುಎಸ್ ಪಾಶ್ಚಿಮಾತ್ಯ ನಿರ್ಮಿತ ದೂರಗಾಮಿ ಕ್ಷಿಪಣಿಗಳಿಂದ ರಷ್ಯಾದ ಭೂಪ್ರದೇಶದ ಮೇಲೆ ದಾಳಿ ಮಾಡಲು ಉಕ್ರೇನ್​ಗೆ ಸಹಾಯ ಮಾಡಿದಲ್ಲಿ ಅದು ರಷ್ಯಾದೊಂದಿಗೆ ನೇರ ಯುದ್ಧಕ್ಕಿಳಿದಂತೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ನ್ಯಾಟೋಗೆ ಎಚ್ಚರಿಕೆ ನೀಡಿದ್ದಾರೆ.

ಆರೋಪ ತಳ್ಳಿ ಹಾಕಿದ ಯುಕೆ:ಏತನ್ಮಧ್ಯೆ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತುಕತೆ ನಡೆಸಲು ವಾಷಿಂಗ್ಟನ್​ಗೆ ಆಗಮಿಸಿರುವ ಯುಕೆ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ರಷ್ಯಾದ ಆರೋಪವನ್ನು ತಳ್ಳಿ ಹಾಕಿದ್ದು, ಉಕ್ರೇನ್ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಹೇಳಿದರು. ಅಲ್ಲದೆ ಮಾಸ್ಕೋದೊಂದಿಗೆ ತಾವು ಸಂಘರ್ಷವನ್ನು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಪಾಕಿಸ್ತಾನಕ್ಕೆ ಕ್ಷಿಪಣಿ ತಯಾರಿಸಲು ಸಹಾಯ ಮಾಡಿದ 3 ಚೀನಾ ಕಂಪನಿಗಳ ಮೇಲೆ ನಿರ್ಬಂಧ - US Imposes Sanctions On China

ABOUT THE AUTHOR

...view details