ಜೋದ್ಪುರ್: ರಾಜಸ್ಥಾನ ಆಡಳಿತಾತ್ಮಕ ಸೇವೆಗಳ(ಆರ್‌ಎಎಸ್) ಅಧಿಕಾರಿ ಪ್ರಿಯಾಂಕಾ ಬಿಷ್ಣೋಯಿ ಅವರ ಅಕಾಲಿಕ ಸಾವಿಗೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ದೂರಿದ್ದಾರೆ.
ಗುಜರಾತ್ನ ಅಹ್ಮದಾಬಾದ್ ಸಿಐಎಂಎಸ್ ಆಸ್ಪತ್ರೆಯಲ್ಲಿ ಪ್ರಿಯಾಂಕಾ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಜೋದ್ಪುರದ ವಸುಂಧರಾ ಆಸ್ಪತ್ರೆಯಲ್ಲಿ ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಬಳಿಕ ಅಧಿಕಾರಿಯ ಆರೋಗ್ಯ ಹದಗೆಟ್ಟಿತ್ತು. ನಂತರ ಅವರು ಸಾವನ್ನಪ್ಪಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿಯ ಮಾವ ಸಾಹಿರಾಮ್ ಬಿಷ್ಣೋಯಿ 'ಈಟಿವಿ ಭಾರತ್'ಗೆ ತಿಳಿಸಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬಿಷ್ಣೋಯಿ ಸಮುದಾಯ ಕೂಡಾ ಭಾರಿ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದೆ. ಇದೇ ವೇಳೆ ಪ್ರಶಸ್ತಿ ವಿಜೇತ ಅಧಿಕಾರಿಯ ಕಾರ್ಯ ಮತ್ತು ಸಮರ್ಪಣಾ ಮನೋಭಾವದ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ.
ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಜಿಲ್ಲಾಧಿಕಾರಿ ಗೌರವ್ ಅಗರ್ವಾಲ್ ಅವರು ಎಸ್ಎನ್ ವೈದ್ಯಕೀಯ ಕಾಲೇಜಿನ ಐವರು ಸದಸ್ಯರ ತಂಡವನ್ನು ತನಿಖೆಗೆ ರಚಿಸಿದ್ದಾರೆ. ಮೂರು ದಿನದೊಳಗೆ ಈ ತಂಡ ವರದಿ ನೀಡಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರೇಮ ನಿವೇದನೆ ತಿರಿಸ್ಕರಿಸಿದ ಯುವತಿ ಮೇಲೆ ಕಾರು ಹರಿಸಿದ ಯುವಕ