ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಹುದ್ದೆ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪರಿಷ್ಕೃತ ಅಧಿಸೂಚನೆ ಪ್ರಕಟಿಸಿದೆ. ಕಳೆದ ಏಪ್ರಿಲ್ನಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಗೆ 3 ವರ್ಷದ ವಯೋಮಿತಿ ಸಡಿಲಿಕೆಯೊಂದಿಗೆ ತಿದ್ದುಪಡಿ ಮಾಡಿ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ: ಗ್ರೂಪ್ ಸಿ ಮತ್ತು ಗ್ರೂಪ್ ಬಿಯ 247 ಹುದ್ದೆಗೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿ 3 ವರ್ಷದ ಸಡಿಲಿಕೆ ಮಾಡಲಾಗಿದೆ.
- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಹೈದರಾಬಾದ್ ಕರ್ನಾಟಕ) - 97
- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಆರ್ಪಿಸಿ)- 150
ವಿದ್ಯಾರ್ಹತೆ: ಅಂಗೀಕೃತ ವಿವಿಯಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಕ್ಟೋಬರ್ 3ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಗರಿಷ್ಠ ವಯೋಮಿತಿ 41 ವರ್ಷ, ಪ.ಜಾ, ಪ.ಪಂ ಮತ್ತು ಪ್ರವರ್ಗ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 43 ವರ್ಷ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹಿಂದೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ಅಭ್ಯರ್ಥಿಗಳು ಇದೀಗ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಪ.ಜಾ, ಪ.ಪಂ ಮತ್ತು ಪ್ರವರ್ಗ- 1 ಮತ್ತು ವಿಸೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡಲಾಗಿದೆ. ನಿವೃತ್ತ ಸೇವಾದಾರ ಅಭ್ಯರ್ಥಿಗಳಿಗೆ 50 ರೂ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 300 ರೂ ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ ಅರ್ಜಿ ಶುಲ್ಕವಿದೆ.
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಸೆಪ್ಟೆಂಬರ್ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 3 ಕಡೇಯ ದಿನಾಂಕ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kpsc.kar.nic ಭೇಟಿ ನೀಡಿ.
ಇದನ್ನೂ ಓದಿ: ಸಿಇಟಿ/ನೀಟ್: 2ನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ಫಲಿತಾಂಶ ಪ್ರಕಟ; ಲಭ್ಯವಿರುವ ಸೀಟ್ಗಳೆಷ್ಟು?