ತುಮಕೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ಮಾಪಕ ಕೆ. ಮಂಜು ಅವರ ಮಗ ನಟ ಶ್ರೇಯಸ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ. ಅದೃಷ್ಟವಶಾತ್, ನಟನಿಗೆ ಯಾವುದೇ ತೊಂದರೆ ಆಗಿಲ್ಲ. ತಮ್ಮ ವಿಷ್ಣು ಪ್ರಿಯಾ ಸಿನಿಮಾ ಪ್ರಚಾರ ಮಾಡೋ ಸಲುವಾಗಿ ಬೆಂಗಳೂರಿನಿಂದ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ತುಮಕೂರು ಜಿಲ್ಲೆಯ ಶಿರಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿ ನಟನ ಕಾರಿನ ಎಡಭಾಗಕ್ಕೆ ಅಲ್ಪ ಪ್ರಮಾಣದಲ್ಲಿ ಡಿಕ್ಕಿ ಹೊಡೆದಿದ್ದು, ಕಾರಿಗೆ ಹಾನಿಯಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶಿರಾ ಪೊಲೀಸ್ ಠಾಣೆ ಸಿಬ್ಬಂದಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ನಾನು ಸೇಫ್ ಆಗಿದ್ದೇನೆ' : ತಮ್ಮ ಮೆಚ್ಚಿನ ನಟ, ಹಿರಿಯ ನಿರ್ಮಾಪಕರ ಪುತ್ರ ಅಪಘಾತಕ್ಕೀಡಾಗಿದ್ದಾರೆ ಅನ್ನೋ ಸುದ್ದಿ ಶರವೇಗದಲ್ಲಿ ವೈರಲ್ ಆಗಿ, ಅಭಿಮಾನಿಗಳ ಕಳವಳಕ್ಕೆ ಕಾರಣವಾಯ್ತು. ಘಟನೆ ನಡೆದ ಕೆಲವೇ ಹೊತ್ತಲ್ಲಿ, ಸ್ವತಃ ನಟ ಪೋಸ್ಟ್ ಶೇರ್ ಮಾಡುವ ಮೂಲಕ ಫ್ಯಾನ್ಸ್ ಚಿಂತೆಯನ್ನು ದೂರ ಮಾಡಿದ್ದಾರೆ. ಹೌದು, ''ಹಾಯ್, ನಾನು ಸಂಪೂರ್ಣ ಸುರಕ್ಷಿತನಾಗಿದ್ದೇನೆ. ಉತ್ತಮವಾಗಿದ್ದೇನೆ. ವಿಷ್ಣು ಪ್ರಿಯಾ ಸಿನಿಮಾ ಪ್ರಚಾರದ ಸಲುವಾಗಿ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ಸಂದರ್ಭ ದುರಾದೃಷ್ಟ ಎಂಬಂತೆ ಕಾರು ಅಪಘಾತಕ್ಕೊಳಗಾಯಿತು. ನಿಮ್ಮ ಕಾಳಜಿ, ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನಟನ ಪೋಸ್ಟ್ನ ಕಮೆಂಟ್ ಸೆಕ್ಷನ್ನಲ್ಲಿ ಥ್ಯಾಂಕ್ ಗಾಡ್, ಟೇಕ್ ಕೇರ್ ಎಂಬ ಹಾರೈಕೆಗಳನ್ನು ಕಾಣಬಹುದು.
ಇದನ್ನೂ ಓದಿ: ಶೂಟಿಂಗ್ ಸೆಟ್‌ನಲ್ಲಿ ಕಾರು ಅಪಘಾತ: ಅಪಾಯದಿಂದ ಪಾರಾದ ನಟ ನವಾಜುದ್ದೀನ್ ಸಿದ್ದಿಕಿ, ಗಾಯಗೊಂಡ ಚಾಲಕ
ನಟ ನವಾಜುದ್ದೀನ್ ಸಿದ್ದಿಕಿ ಕಾರು ಅಪಘಾತ : ಮತ್ತೊಂದು ಘಟನೆಯಲ್ಲಿ, ಬಾಲಿವುಡ್ ನಟನ ಕಾರು ಅಪಘಾತಕ್ಕೀಡಾಗಿದೆ. ಉತ್ತರ ಪ್ರದೇಶದ ಕಾನ್ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ 'ರಾತ್ ಅಕೇಲಿ ಹೈ' ವೆಬ್ ಸೀರಿಸ್ನ ಎರಡನೇ ಭಾಗದ ಶೂಟಿಂಗ್ ಭಾನುವಾರ ಶುರುವಾಗಿದೆ. ಚಿತ್ರೀಕರಣದ ಸಂದರ್ಭ ದೊಡ್ಡ ಪ್ರಮಾಣದಲ್ಲಿ ಕಾರು ಅಪಘಾತ ಸಂಭವಿಸಿದೆ. ಮಂಗಳವಾರ ತಡರಾತ್ರಿ 1:45ರ ಸುಮಾರಿಗೆ ನಟನಿದ್ದ ಕಾರು ಪೊಲೀಸ್ ಠಾಣೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ, ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ನಟ ನವಾಜುದ್ದೀನ್ ಸಿದ್ದಿಕಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಟೀರಿಂಗ್ ವ್ಹೀಲ್ ಸರಿಯಾಗಿ ಕೆಲಸ ಮಾಡದ ಹಿನ್ನೆಲೆ ಚಿತ್ರೀಕರಣದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ದೊಡ್ಡ ಪ್ರಮಾಣದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಇದೆ. ಗಾಯಗೊಂಡ ಚಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಶಾಂತ್ ನೀಲ್-ಜೂ.ಎನ್ಟಿಆರ್ ಸಿನಿಮಾ ಶೂಟಿಂಗ್ ಶುರು: ಮೊದಲ ಸೀನ್ ಹೇಗಿದೆ?