ಕರ್ನಾಟಕ

karnataka

ETV Bharat / international

ಬಂಡುಕೋರರ ವಶಕ್ಕೆ ಸಿರಿಯಾದ 2ನೇ ಅತಿದೊಡ್ಡ ನಗರ ಹಮಾ: ಅಧ್ಯಕ್ಷ ಬಶರ್​ಗೆ ಮತ್ತೊಂದು ಹಿನ್ನಡೆ - SYRIA WAR

ಸಿರಿಯಾದ ಎರಡನೇ ಅತಿದೊಡ್ಡ ನಗರ ಹಮಾ ಮೇಲೆ ಬಂಡುಕೋರರು ನಿಯಂತ್ರಣ ಸಾಧಿಸಿದ್ದಾರೆ.

ಸಿರಿಯಾ ಹೋರಾಟದ ದೃಶ್ಯ
ಸಿರಿಯಾ ಹೋರಾಟದ ದೃಶ್ಯ (IANS)

By ETV Bharat Karnataka Team

Published : Dec 6, 2024, 12:56 PM IST

ಡಮಾಸ್ಕಸ್, ಸಿರಿಯಾ: ವಿವಿಧ ದಿಕ್ಕುಗಳಿಂದ ಆಕ್ರಮಣ ನಡೆಸಿರುವ ಬಂಡುಕೋರ ಪಡೆಗಳು ಹಮಾ ನಗರದೊಳಗೆ ಪ್ರವೇಶಿಸಿವೆ ಎಂದು ಸಿರಿಯನ್ ಸೇನೆ ಗುರುವಾರ ಒಪ್ಪಿಕೊಂಡಿದೆ. ಈ ಮೂಲಕ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರಿಗೆ ತೀವ್ರ ಹಿನ್ನಡೆಯಾದಂತಾಗಿದೆ. ಬಂಡುಕೋರ ಪಡೆಗಳೊಂದಿಗೆ ತೀವ್ರ ಹೋರಾಟದ ನಂತರ ಪಶ್ಚಿಮ - ಮಧ್ಯ ಸಿರಿಯಾದ ನಗರ ಹಮಾದ ಹೊರಗೆ ತನ್ನ ಪಡೆಗಳನ್ನು ಮರು ನಿಯೋಜಿಸಿರುವುದಾಗಿ ಸೇನೆ ಹೇಳಿಕೊಂಡಿದೆ.

"ಹಮಾ ನಗರದ ಮೇಲೆ ವಿವಿಧ ದಿಕ್ಕುಗಳಿಂದ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕ ಸಂಘಟನೆಗಳು ಪ್ರಾರಂಭಿಸಿದ ಹಿಂಸಾತ್ಮಕ ಮತ್ತು ಸತತ ದಾಳಿಗಳನ್ನು ಹಿಮ್ಮೆಟ್ಟಿಸಲು ನಮ್ಮ ಸಶಸ್ತ್ರ ಪಡೆಗಳು ಹೋರಾಟ ನಡೆಸುತ್ತಿವೆ" ಎಂದು ಸೇನೆ ಮತ್ತು ಸಶಸ್ತ್ರ ಪಡೆಗಳ ಸಿರಿಯನ್ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

2ನೇ ಪ್ರಮುಖ ನಗರದ ಮೇಲೆ ನಿಯಂತ್ರಣ ಸಾಧಿಸಿದ ಬಂಡುಕೋರರು:ಹಮಾದಿಂದ ಸರ್ಕಾರಿ ಮಿಲಿಟರಿ ಹಿಂದೆ ಸರಿದ ನಂತರ ಎರಡನೇ ಪ್ರಮುಖ ನಗರ ಹಮಾ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಸಿರಿಯನ್ ಬಂಡುಕೋರರು ಹೇಳಿದ್ದಾರೆ. ಹಮಾದಲ್ಲಿ ವಿಜಯ ದಾಖಲಿಸಲಾಗಿದ್ದು, ಯಾರ ಮೇಲೆಯೂ ಸೇಡಿನ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಯಾತ್ ತಹ್ರಿರ್ ಅಲ್-ಶಾಮ್ (ಎಚ್​ಟಿಎಸ್) ನಾಯಕ ಅಬು ಮೊಹಮ್ಮದ್ ಅಲ್-ಜವ್ಲಾನಿ ಹೇಳಿದ್ದಾರೆ.

ಸಾವಿರಾರು ಕೈದಿಗಳನ್ನು ಬಿಡುಗಡೆ ಮಾಡಿದ ಬಂಡುಕೋರರು:ಇದಕ್ಕೂ ಮುನ್ನ ಎಚ್​ಟಿಎಸ್ ಹೋರಾಟಗಾರರು ಹಮಾ ಕೇಂದ್ರ ಕಾರಾಗೃಹವನ್ನು ವಶಪಡಿಸಿಕೊಂಡು ಅದರಲ್ಲಿ ಬಂಧಿಯಾಗಿದ್ದ ಸಾವಿರಾರು ಕೈದಿಗಳನ್ನು ಬಿಡುಗಡೆ ಮಾಡಿದರು.

10 ಲಕ್ಷ ಜನಸಂಖ್ಯೆ ಹೊಂದಿರುವ ಹಮಾ:ಸುಮಾರು 10 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಹಮಾ ಅಲೆಪ್ಪೊದಿಂದ ದಕ್ಷಿಣಕ್ಕೆ 110 ಕಿ.ಮೀ (70 ಮೈಲಿ) ದೂರದಲ್ಲಿದೆ. ಕಳೆದ ವಾರ ಬಂಡುಕೋರರು ದೇಶದ ವಾಯುವ್ಯದಲ್ಲಿ ದಿಢೀರ್ ದಾಳಿ ಆರಂಭಿಸಿ ಅಲೆಪ್ಪೊವನ್ನು ವಶಪಡಿಸಿಕೊಂಡಿದ್ದರು. ಶಾಂತಿಯುತ ಪ್ರತಿಭಟನೆಗಳನ್ನು ಅಸ್ಸಾದ್ ಸರ್ಕಾರ ಹಿಂಸಾತ್ಮಕವಾಗಿ ಹತ್ತಿಕ್ಕಿದ ಪರಿಣಾಮದಿಂದ 2011 ರಲ್ಲಿ ದೇಶದಲ್ಲಿ ಅಂತರ್ಯುದ್ಧ ಭುಗಿಲೆದ್ದು, 5 ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.

ಹಲವಾರು ದಿನಗಳ ಭಾರಿ ಹೋರಾಟದ ನಂತರ ಬಂಡುಕೋರರು ಹಮಾದ ಉತ್ತರಕ್ಕೆ ಸರ್ಕಾರದ ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸಗೊಳಿಸಿದ್ದಾರೆ. ಅಲೆಪ್ಪೊದ ಪತನದ ನಂತರ ಸೈನ್ಯವು ನಗರಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಿತ್ತು. ಆದರೆ ರಷ್ಯಾದ ವಾಯುದಾಳಿ ಮತ್ತು ಇರಾನ್ ಬೆಂಬಲಿತ ಹೋರಾಟಗಾರರ ಬೆಂಬಲದ ಹೊರತಾಗಿಯೂ ಗುರುವಾರ ಬಂಡುಕೋರರು ಹಮಾ ನಗರ ವಶಪಡಿಸಿಕೊಳ್ಳುವುದನ್ನು ತಡೆಯಲು ಪಡೆಗಳಿಗೆ ಸಾಧ್ಯವಾಗಲಿಲ್ಲ. ಸಿರಿಯಾದ ನಾಗರಿಕರ ರಕ್ಷಣೆ ಮಾಡುವಂತೆ ಮತ್ತು ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅಡ್ಡಿಪಡಿಸದಂತೆ ವಿಶ್ವಸಂಸ್ಥೆ ಮತ್ತು ಮಾನವೀಯ ಸಂಸ್ಥೆಗಳು ಕರೆ ನೀಡಿವೆ.

ಇದನ್ನೂ ಓದಿ : 'ಮೇಕ್ ಇನ್ ಇಂಡಿಯಾ' ಶ್ಲಾಘನೀಯ, ಭಾರತದಲ್ಲಿ ಹೂಡಿಕೆಗೆ ರಷ್ಯಾ ಸಿದ್ಧ: ಪುಟಿನ್

ABOUT THE AUTHOR

...view details