ನ್ಯೂಯಾರ್ಕ್ : ಸರ್ಕಾರದ ದಕ್ಷತೆಯನ್ನು ಸುಧಾರಿಸುವ ಸಂಸ್ಥೆಯೊಂದರ ಸಹ ಮುಖ್ಯಸ್ಥರಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿರುವ ವಿವೇಕ್ ರಾಮಸ್ವಾಮಿ ಅವರು, ಓಹಿಯೋ ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ರಾಮಸ್ವಾಮಿ ಅವರು "ಶೀಘ್ರದಲ್ಲೇ" ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಬಗ್ಗೆ ಘೋಷಿಸಲಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಅವರು ಚುನಾಯಿತರಾದರೆ, ಅವರು ಲೂಯಿಸಿಯಾನದಲ್ಲಿ ಬಾಬಿ ಜಿಂದಾಲ್ ಮತ್ತು ದಕ್ಷಿಣ ಕೆರೊಲಿನಾದ ನಿಕ್ಕಿ ಹ್ಯಾಲಿ ನಂತರ ಚುನಾಯಿತರಾದ ಮೂರನೇ ಭಾರತೀಯ - ಅಮೆರಿಕನ್ ಗವರ್ನರ್ ಆಗಲಿದ್ದಾರೆ.
ಎಡಪಂಥೀಯ ವಿರೋಧಿ ಹೋರಾಟಗಾರ ರಾಮಸ್ವಾಮಿ (39) ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮ ನಿರ್ದೇಶನಕ್ಕಾಗಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ್ದರು. ಆದರೆ, ನಂತರ ಅವರ ಬೆಂಬಲಿಗರಲ್ಲಿ ಒಬ್ಬರಾಗಲು ಆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಟ್ರಂಪ್ ಅವರು ರಾಮಸ್ವಾಮಿ ಅವರನ್ನ ಎಲೋನ್ ಮಸ್ಕ್ ಅವರೊಂದಿಗೆ ಸರ್ಕಾರದ ದಕ್ಷತೆಯ ವಿಭಾಗದ (DOGE) ಸಹ-ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು. ಪ್ರಚಾರದ ಸಮಯದಲ್ಲಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯಾಗಿಯೂ ಪರಿಗಣಿಸಬಹುದು ಎಂದು ಸುಳಿವು ನೀಡಿದ್ದರು. "ಅವರು ನಿಜವಾಗಿಯೂ ಬುದ್ಧಿವಂತರಾಗಿದ್ದಾರೆ ಮತ್ತು ಅವರು ನಮ್ಮ ಆಡಳಿತದಲ್ಲಿ ಭಾಗಿಯಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಹೇಳಿದ್ದರು. ಅಷ್ಟೇ ಅಲ್ಲ. ನಾವು ಅವರಿಗೆ ಈ ದೊಡ್ಡ ಕೆಲಸಕ್ಕೆ ನೇಮಿಸಬಹುದು. ಮತ್ತು ನೀವೆಲ್ಲರೂ ಯೋಚಿಸುವುದಕ್ಕಿಂತ ಉತ್ತಮವಾಗಿ ಅವರು ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದರು.