ಕ್ವೆಟ್ಟಾ(ಪಾಕಿಸ್ತಾನ):ಬಂದೂಕುಧಾರಿಗಳು ಟ್ರಕ್ ಮತ್ತು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ 23 ಜನರನ್ನು ಕೆಳಗಿಳಿಸಿ, ಅವರ ಜನಾಂಗೀಯತೆ ಪರಿಶೀಲಿಸಿ ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಭದ್ರತಾ ಪಡೆಗಳು, ಪಂಥೀಯ, ಜನಾಂಗೀಯ ಮತ್ತು ಪ್ರತ್ಯೇಕತಾವಾದಿ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಬಲೂಚಿಸ್ತಾನ್ ಪ್ರಾಂತ್ಯದ ಮುಸಾಖೈಲ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಈ ದಾಳಿ ನಡೆದಿದೆ. ದಾಳಿಕೋರರು ಘಟನಾ ಸ್ಥಳದಿಂದ ಪರಾರಿಯಾಗುವುದಕ್ಕೂ ಮುನ್ನ 10 ವಾಹನಗಳನ್ನು ಸುಟ್ಟುಹಾಕಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಪಾಕಿಸ್ತಾನದ ಪಂಜಾಬ್‌ನಿಂದ ಬಲೂಚಿಸ್ತಾನ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭಯೋತ್ಪಾದಕರು, ಹಲವು ಬಸ್‌ಗಳು, ಟ್ರಕ್ ಮತ್ತು ವ್ಯಾನ್‌ಗಳನ್ನು ತಡೆದು ಕನಿಷ್ಠ 23 ಜನರು ಹತ್ಯೆ ಮಾಡಿದ್ದಾರೆ ಮತ್ತು 5 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ಗೆ ಕಡೆಗೆ ತೆರಳುವ ವಾಹನಗಳನ್ನು ಪರಿಶೀಲಿಸಿ, ಅದರಲ್ಲಿದ್ದ ಪಂಜಾಬ್ ಜನರನ್ನು ಗುರುತಿಸಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪಂಜಾಬಿನ ಕಾರ್ಮಿಕರಾಗಿದ್ದಾರೆ" ಎಂದು ಮುಸಾಖೈಲ್ ಜಿಲ್ಲೆಯ ಹಿರಿಯ ಅಧಿಕಾರಿ ನಜಿಬುಲ್ಲಾ ಕಾಕರ್ ತಿಳಿಸಿದ್ದಾರೆ.
ಬಲೂಚ್ ಲಿಬರೇಶನ್ ಆರ್ಮಿ ಯಿಂದ ಕೃತ್ಯದ ಶಂಕೆ: ಜಿಲ್ಲೆಯ ಮತ್ತೋರ್ವ ಹಿರಿಯ ಅಧಿಕಾರಿ ಹಮೀದ್ ಜೆಹ್ರಿ ಪ್ರತಿಕ್ರಿಯಿಸಿ, "ಘಟನೆಯ ಹಿಂದೆ ಬಿಎಲ್‌ಎ (ಬಲೂಚ್ ಲಿಬರೇಶನ್ ಆರ್ಮಿ) ಭಯೋತ್ಪಾದಕರು ಇದ್ದಾರೆ ಎಂದು ಮೇಲ್ನೋಟಕ್ಕೆ ತೋರುತ್ತದೆ" ಎಂದು ಶಂಕಿಸಿದ್ದಾರೆ.
ಘಟನೆ ಖಂಡಿಸಿದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ:ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಸಚಿವ ಮೊಹ್ಸಿನ್ ನಖ್ವಿ ತಮ್ಮ ಪ್ರತ್ಯೇಕ ಹೇಳಿಕೆಗಳಲ್ಲಿ ಈ ದಾಳಿಯನ್ನು "ಅತ್ಯಂತ ಕ್ರೂರ" ಎಂದು ಬಣ್ಣಿಸಿದ್ದಾರೆ ಮತ್ತು ಇದರ ಹಿಂದಿರುವವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಹೆದ್ದಾರಿಗಳಲ್ಲಿ ಪ್ರಯಾಣಿಸದಂತೆ ಬಿಎಲ್ಎ ಸಂಘಟನೆ ಜನರಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ. ಆದರೆ ಸಂಘಟನೆ ಮಾತ್ರ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು, ಅನೇಕ ವರ್ಷಗಳಿಂದ ದೇಶದ ಪೂರ್ವ ಪಂಜಾಬ್ ಪ್ರದೇಶದ ಕಾರ್ಮಿಕರನ್ನು ಮತ್ತು ಇತರರನ್ನು ಬಲೂಚಿಸ್ತಾನ ತೊರೆಯುವಂತೆ ಮಾಡುವ ಭಾಗವಾಗಿ ಆಗಾಗ ಇಂತಹ ಕೃತ್ಯ ಎಸಗುತ್ತಿದ್ದಾರೆ. ಈ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳೂ ಸಕ್ರಿಯವಾಗಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ಬಲೂಚಿಸ್ತಾನ ಪ್ರಾಂತ್ಯ ಹಿಂದುಳಿದೆ. ಹೀಗಾಗಿ ಇಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿರುತ್ತವೆ.
ಇದನ್ನೂ ಓದಿ:ಲಾಹೋರ್ ರ್‍ಯಾಲಿ ಮುಂದೂಡಿದ ತೆಹ್ರೀಕ್ ಇ ಇನ್ಸಾಫ್: ಕಾರಣ? - imran Khan PTI party