ಬಿಗ್ ಬಾಸ್ ಕನ್ನಡ ಸೀನಸ್ 11 ಫಿನಾಲೆ ಹೊಸ್ತಿಲಲ್ಲಿದೆ. ಅಂತಿಮ ಘಟ್ಟಕ್ಕೆ ದಿನಗಣನೆ ಆರಂಭವಾಗಿದೆ. ಸ್ಪರ್ಧಿಗಳ ಅಸಲಿತನವೂ ಅನಾವರಣಗೊಳ್ಳುತ್ತಿದೆ. ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮದೇ ಆದ ಅಭಿಮಾನಿ ಬಳಗ ಸಂಪಾದಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಯೊಬ್ಬರ ಆಟದ ಬಗ್ಗೆಯೂ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಭಾವನಾತ್ಮಕ ವಾರದ ನಂತರ ಟಾಸ್ಕ್ಗಳು ಚುರುಕಾಗಿವೆ. ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.
ಇದೀಗ ಧನರಾಜ್ ಆಚಾರ್ ಮೋಸಹೋದ್ರಾ ಎಂಬ ಪ್ರಶ್ನೆ ಎದ್ದಿದೆ. ಫಿನಾಲೆ ಟಿಕೆಟ್ ಎದುರು ಹರಕೆಯ ಕುರಿ ಆದ್ರಾ ಧನರಾಜ್? ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ ಅಡಿ ಅನಾವರಣಗೊಂಡಿದ್ದು, ಧನರಾಜ್ ಅವರಿಗೆ ಹೀಗಾಗಬಾರದಿತ್ತು ಅನ್ನೋ ಅಭಿಪ್ರಾಯ ಮೂಡಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಟಾಸ್ಕ್ಗಳ ನಡುವೆ ಸ್ಪರ್ಧಿಗಳನ್ನು ಟಿಕೆಟ್ ಟು ಫಿನಾಲೆ ರೇಸ್ನಿಂದ ಹೊರಗಿಡುವಂತೆ ಬಿಗ್ ಬಾಸ್ ಸೂಚಿಸುತ್ತಿದ್ದಾರೆ. ಅದರಂತೆ, ಇಂದು ಪ್ರಸಾರವಾಗಲಿರುವ ಸಂಚಿಕೆಯಲ್ಲೂ ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಮಂಜು ಮತ್ತು ಗೌತಮಿ ಇಬ್ಬರೂ ಧನರಾಜ್ ಆಚಾರ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
ನಿಮ್ಮ ಪೈಕಿ ಒಬ್ಬರನ್ನು ಟಿಕೆಟ್ ಟು ಫಿನಾಲೆ ಓಟದಿಂದ ಹೊರಕಳುಹಿಸಬೇಕು ಎಂಬ ಬಿಗ್ ಬಾಸ್ ಹಿನ್ನೆಲೆ ದನಿಯೊಂದಿಗೆ ಪ್ರೋಮೋ ಪ್ರಾರಂಭಗೊಂಡಿದೆ. ಆಪ್ತ ಸ್ನೇಹಿತರಾದ ಮಂಜು ಮತ್ತು ಗೌತಮಿ ಇಬ್ಬರೂ ಧನರಾಜ್ ಹೆಸರು ತೆಗೆದುಕೊಳ್ತೀನಿ ಎಂದು ತಿಳಿಸಿದ್ದಾರೆ. ಅವರ ಘೋಷಣೆಗೂ ಮುನ್ನ ಇದೇ ಹೆಸರು ಬರಬಹುದು ಎಂಬಂತಿತ್ತು ಇತರೆ ಸ್ಪರ್ಧಿಗಳ ಎಕ್ಸ್ಪ್ರೆಶನ್ಸ್. ಮಾರಿ ಹಬ್ಬ ಜಾತ್ರೇಲಿ ಬಲಿ ಕೊಟ್ಟ ಕುರಿ ಎಂದು ಭವ್ಯಾ ಪ್ರತಿಕ್ರಿಯಿಸಿದ್ದಾರೆ. ಇವರ ನಿರ್ಧಾರಕ್ಕೆ ಇತರೆ ಸ್ಪರ್ಧಿಗಳು ವ್ಯಂಗ್ಯ ನಗು ಬೀರಿದ್ದಾರೆ. ಆಪ್ತ ಸ್ನೇಹಿತರು ಸೇರಿ ಧನರಾಜ್ ಅವರನ್ನು ಬಕ್ರಾ ಮಾಡಿದ್ರು ಎನ್ನುವಂತಿತ್ತು ಇತರೆ ಸ್ಪರ್ಧಿಗಳ ಚಪ್ಪಾಳೆ ಮತ್ತು ನಗು. ಮೊದಲ ಎರಡ್ಮೂರು ವಾರ ಸ್ವಲ್ಪ ಹಿಂಜರಿತಿದ್ರು ಅಂತಾ ಗೌತಮಿ ತಮ್ಮ ಕಾರಣಗಳನ್ನು ಕೊಟ್ಟಿದ್ದಾರೆ.
ಇದನ್ನೂ ಓದಿ: ಆಟದಿಂದ ಚೈತ್ರಾ ಕುಂದಾಪುರರನ್ನು ಹೊರಗಿಟ್ಟ ಮಂಜು, ಗೌತಮಿ, ಧನರಾಜ್ : ಟಾರ್ಗೆಟ್ ಎಂದು ಕಣ್ಣೀರಿಟ್ಟ ಸ್ಪರ್ಧಿ
ವಿಸಿಲ್ ಹೊಡೆದು ಜೋರಾಗಿ ಚಪ್ಪಾಳೆ ಹೊಡೆದ ರಜತ್, ಮೊದಲ ವಾರಗಳಲ್ಲಿ ಏಕೆ ಆಡಲಿಲ್ಲ ಧನರಾಜ್ ಎಂದು ಪ್ರಶ್ನಿಸಿದ್ದಾರೆ. ಅವರ ಪ್ರಕಾರ ಗೌತಮಿ ವೀಕ್ ಕಂಟಸ್ಟೆಂಟ್. ಮಂಜು ಬಳಿ ಧನು ಗೌತಮಿಗಿಂತ ವೀಕ್ ಆ ಎಂದು ರಜತ್ ಪ್ರಶ್ನಿಸಿದ್ದಾರೆ. ಇಲ್ಲಿ ನಾನೊಬ್ಬನೇ ಆಡುತ್ತಿರೋದು, ಯಾರುನ್ನೋ ಜೊತೇಲಿ ಕರ್ಕೊಂಡು ಇನ್ನೊಂದು ಮತ್ತೊಂದು ಅಂತೇನಿಲ್ಲ ಎಂದು ಮಂಜು ಸ್ಪಷ್ಟಪಡಿಸಿದ್ದು, ಮೋಕ್ಷಿತಾ ನಕ್ಕು ಟೀಕಿಸಿದ್ದಾರೆ. ಕೊನೆಗೆ ದೋಸ್ತ ಹನುಮಂತು ಅವರು ಧನರಾಜ್ರನ್ನು ಸಮಾಧಾನಪಡಿಸಿದ್ದಾರೆ.