ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿದ್ದರೆ ಅಕ್ಟೋಬರ್ 15 ರಂದು ಇಸ್ಲಾಮಾಬಾದ್ ನ ಡಿ-ಚೌಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಘೋಷಿಸಿದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ.
"ಜೈಲಿನಲ್ಲಿರುವ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಅವರ ಕುಟುಂಬದವರು ಮತ್ತು ವಕೀಲರು ಭೇಟಿಯಾಗಲು ಅವಕಾಶ ನೀಡದಿದ್ದರೆ ಅಕ್ಟೋಬರ್ 15 ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಪಿಟಿಐ ಪಕ್ಷದ ಕೇಂದ್ರ ಮಾಹಿತಿ ಕಾರ್ಯದರ್ಶಿ ಶೇಖ್ ವಕಾಸ್ ಅಕ್ರಮ್ ಹೇಳಿದರು. ಕಳೆದ ಐದರಿಂದ ಆರು ವಾರಗಳಿಂದ ಇಮ್ರಾನ್ ಖಾನ್ ಅವರನ್ನು ವಕೀಲರು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರೂ ಭೇಟಿಯಾಗದಂತೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ಅವರು ಹೇಳಿದರು.
"ನಮ್ಮ ನಾಯಕ ಇಮ್ರಾನ್ ಖಾನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ವರದಿಗಳು ಕಳವಳ ಮೂಡಿಸಿವೆ. ನಾವು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿಲ್ಲ. ನಮ್ಮ ಪ್ರತಿಭಟನೆ ಏನಿದ್ದರೂ ಇಮ್ರಾನ್ ಖಾನ್ ಅವರ ಭೇಟಿಯ ಅವಕಾಶಕ್ಕಾಗಿ ಮಾತ್ರ" ಎಂದು ಶೇಖ್ ವಕಾಸ್ ಅಕ್ರಮ್ ತಿಳಿಸಿದ್ದಾರೆ.