ಢಾಕಾ (ಬಾಂಗ್ಲಾದೇಶ) :ಪ್ರಧಾನಿ ಶೇಕ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಇಂದು (ಆಗಸ್ಟ್ 4) ನಡೆದ ಘರ್ಷಣೆಯಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಇದರಲ್ಲಿ 14 ಪೊಲೀಸರು ಇದ್ದಾರೆ. ಸಂಘರ್ಷ ತಡೆಗೆ ಸರ್ಕಾರ ಇಡೀ ದೇಶದಲ್ಲಿ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಿದೆ.
ಮೀಸಲಾತಿ ಹೋರಾಟ ಮತ್ತು ಅದರಲ್ಲಿ ಸಾವನ್ನಪ್ಪಿದ 200 ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿ ಭಾನುವಾರದಿಂದ ಪ್ರತಿಭಟನಾಕಾರರು ಅಸಹಕಾರ ಚಳವಳಿ ಆರಂಭಿಸಿದ್ದಾರೆ. ಇದಕ್ಕೆ ಆಡಳಿತಾರೂಢ ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರತಿಭಟನಾಕಾರರು ಮತ್ತು ಈ ಮೂರು ಪಕ್ಷಗಳ ಕಾರ್ಯಕರ್ತರ ಮಧ್ಯೆ ಸಂಘರ್ಷ ವಿಕೋಪಕ್ಕೆ ತಿರುಗಿದೆ.
ಬಾಂಗ್ಲಾದೇಶದ 13 ಜಿಲ್ಲೆಗಳಲ್ಲಿ ಸಂಘರ್ಷ ಉಂಟಾಗಿದೆ. ಇದರಲ್ಲಿ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಫೆನಿ, ಮುಶಿಗಂಜ್, ಮಗುರಾ, ಭೋಲಾ, ರಂಗಪುರ, ಪಾಬ್ನಾ, ಸಿಲ್ಹಟ್, ಕೊಮಿಲ್ಲ, ಜೋಯ್ಪುರ್ಹಟ್, ಢಾಕಾ, ಬಾರಿಸಾಲ್ನಲ್ಲಿ ಸಾವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.
ದೇಶದಲ್ಲಿ ನಿಷೇಧಾಜ್ಞೆ ಜಾರಿ:ಬಾಂಗ್ಲಾದಲ್ಲಿ ಸಂಘರ್ಷ ತೀವ್ರವಾಗಿರುವ ಕಾರಣ, ದೇಶದಲ್ಲಿ ಆಗಸ್ಟ್ 4ರ ಸಂಜೆಯಿಂದಲೇ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭದ್ರತಾ ವ್ಯವಸ್ಥೆ ಕೈತಪ್ಪುತ್ತಿರುವ ಕಾರಣ, ಶೇಕ್ ಹಸೀನಾ ನೇತೃತ್ವದ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಫೇಸ್ಬುಕ್, ಮೆಸೆಂಜರ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. 4ಜಿ ಇಂಟರ್ನೆಟ್ ಸ್ಥಗಿತಕ್ಕೂ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಲಾಗಿದೆ.