ನವದೆಹಲಿ: ಭಾರತ-ಮಾರಿಷಸ್ ಬಾಂಧವ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರ್ಚ್ 11ರಿಂದ 13ರವರೆಗೆ ದ್ವೀಪ ರಾಷ್ಟ್ರಕ್ಕೆ ಅಧಿಕೃತ ಭೇಟಿಗಾಗಿ ತೆರಳಿದರು. ರಾಷ್ಟ್ರಪತಿ ಮುರ್ಮು ಅಲ್ಲಿನ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಭಾರತೀಯ ನೌಕಾಪಡೆಯ ಮೊದಲ ತರಬೇತಿ ಸ್ಕ್ವಾಡ್ರನ್ ನ ಎರಡು ಹಡಗುಗಳಾದ ಐಎನ್ಎಸ್ ಟಿಐಆರ್ ಮತ್ತು ಸಿಜಿಎಸ್ ಸಾರಥಿಯೊಂದಿಗೆ ಭಾರತೀಯ ನೌಕಾಪಡೆಯ ಒಂದು ತುಕಡಿ ಮಾರ್ಚ್ 12 ರ ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲಿದೆ.
"ಭಾರತ-ಮಾರಿಷಸ್ ಸಂಬಂಧದಲ್ಲಿ ಹೊಸ ಮೈಲಿಗಲ್ಲು ಇದಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮಾರಿಷಸ್ ಗೆ ಅಧಿಕೃತ ಭೇಟಿ ನೀಡಿದ್ದಾರೆ. ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ರಾಷ್ಟ್ರಪತಿಗಳು ನಾಳೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ" ಎಂದು ವಿದೇಶಾಂಗ ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಈ ಭೇಟಿಯ ಸಮಯದಲ್ಲಿ, ರಾಷ್ಟ್ರಪತಿ ಮುರ್ಮು ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಜಂಟಿಯಾಗಿ ಭಾರತದ ನೆರವಿನಿಂದ ನಿರ್ಮಾಣವಾದ 14 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜುಗ್ನೌತ್ ಅವರು ಅಗಲೇಗಾ ದ್ವೀಪದಲ್ಲಿ ಹೊಸ ಏರ್ ಸ್ಟ್ರಿಪ್ ಮತ್ತು ಜೆಟ್ಟಿ ಮತ್ತು ಇತರ ಆರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಿದ್ದರು.