ಇಸ್ಲಾಮಾಬಾದ್, ಪಾಕಿಸ್ತಾನ: ಪಾಕಿಸ್ತಾನದ ಚುನಾವಣೆ ಮೇಲೆ ಪ್ರಭಾವ ಬೀರಿದ ಸೇನೆ, ಯಾರು ಅಧಿಕಾರಕ್ಕೆ ಬರಬೇಕು ಎಂಬ ವಿಷಯದಲ್ಲಿ ತನ್ನದೇ ಮಾತು ನಡೆಯುವಂತೆ ನಡೆದುಕೊಳ್ಳುತ್ತಿದೆ. ನವಾಜ್ ಷರೀಫ್ ನೇತೃತ್ವದ ಪಿಎಂಎಲ್ - ಎನ್ ಒಕ್ಕೂಟ ಸರ್ಕಾರಕ್ಕೆ ಸೇನೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅಷ್ಟೇ ಅಲ್ಲ ಪಿಪಿಪಿ ಜೊತೆಗೆ ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಸಜ್ಜಾಗಿರುವ ಪಿಎಂಎಲ್-ಎನ್ ಭಾನುವಾರ ಸಂಸತ್ತಿನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಇಮ್ರಾನ್ ಖಾನ್ ಪಕ್ಷದ ಬೆಂಬಲಿತ ಮೊದಲ ಸ್ವತಂತ್ರ ಅಭ್ಯರ್ಥಿಯ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಲಾಹೋರ್‌ನ ನ್ಯಾಷನಲ್ ಅಸೆಂಬ್ಲಿಯ 121ನೇ ಕ್ಷೇತ್ರದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಜ್‌ನ ಧೀಮಂತ ಶೇಖ್ ರೋಹೈಲ್ ಅಸ್ಗರ್ ಅವರನ್ನು ಸೋಲಿಸಿದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿ ವಾಸಿಂ ಖಾದಿರ್ ಅವರು ಪಿಎಂಎಲ್ - ಎನ್‌ಗೆ ಸೇರ್ಪಡೆಗೊಂಡಿದ್ದಾರೆ. ನಾನು ಪಿಎಂಎಲ್ - ಎನ್‌ಗೆ ಸೇರಿದ್ದೇನೆ ಅದು ನನ್ನ ಮನೆಯಾಗಿದೆ, ”ಎಂದು ಸಭೆಯ ನಂತರ ಖಾದಿರ್ ಹೇಳಿಕೆ ನೀಡಿದ್ದಾರೆ.
ಪಿಎಂಎಲ್-ಎನ್ ಮೂಲಗಳ ಪ್ರಕಾರ, ಪಿಟಿಐ ಬೆಂಬಲಿತ ವಿಜೇತರನ್ನ ಮನವೊಲಿಸಿ, ಪಿಎಂಎಲ್- ಎನ್‌ಗೆ ಸೆಳೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಅಂತಹ ಅಭ್ಯರ್ಥಿಗಳು ಪಿಎಂಎಲ್-ಎನ್‌ಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಪಾಕಿಸ್ತಾನದ ಚುನಾವಣಾ ಆಯೋಗವು ಭಾನುವಾರ ಬಿಡುಗಡೆ ಮಾಡಿದ ಅಂತಿಮ ಫಲಿತಾಂಶಗಳ ಪ್ರಕಾರ, 265 ಸ್ಥಾನಗಳ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ PML-N 75 ಸ್ಥಾನಗಳನ್ನು ಗೆದ್ದಿದೆ. ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿಗರಾಗಿ ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗಳು ಅತಿ ಹೆಚ್ಚು 101 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸೇನೆ ಬಯಸುತ್ತಿರುವ ಪಿಎಂಎಲ್-ಎನ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು ಎಂದರೆ ಬಿಲಾವಲ್ ಭುಟ್ಟೊ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (54) ಬೆಂಬಲದ ಅಗತ್ಯವಿದೆ. ಎರಡು ಪಕ್ಷಗಳು ಒಗ್ಗೂಡಿದರೆ 129 ಸ್ಥಾನಗಳಾಗುತ್ತವೆ. ಆಗಲೂ ಬಹುಮತಕ್ಕೆ ನಾಲ್ವರು ಸದಸ್ಯರ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿಟಿಐ ಬೆಂಬಲಿತ ಸಂಸದರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಪಿಎಂಎಲ್ - ಎನ್ ಹವಣಿಸುತ್ತಿದೆ.