ರಿಯೋ ಡಿ ಜನೈರೊ, ಬ್ರೆಜಿಲ್:ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬ್ರೆಜಿಲ್ನಲ್ಲಿ ಪ್ರಸ್ತುತಪಡಿಸಲಾದ ರಾಮಾಯಣ ನಾಟಕವನ್ನು ವೀಕ್ಷಿಸಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಜೊನಾಸ್ ಮಾಸೆಟ್ಟಿ ಮತ್ತು ಅವರ ತಂಡವನ್ನು ಭೇಟಿಯಾದೆ. ವೇದಾಂತ ಮತ್ತು ಭಗವದ್ಗೀತೆಗಳ ಬಗ್ಗೆ ಅವರು ಒಲವು ಹೊಂದಿರುವ ಕುರಿತು ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ ಉಲ್ಲೇಖಿಸಿದ್ದೆ" ಎಂದು ಬರೆದಿದ್ದಾರೆ.
ರಾಮಾಯಣ ನಾಟಕವನ್ನು ಪ್ರಸ್ತುತ ಪಡಿಸಿದ್ದನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, "ನಿಮ್ಮ ತಂಡವು ಸಂಸ್ಕೃತದಲ್ಲಿ ರಾಮಾಯಣದ ಇಣುಕುನೋಟಗಳನ್ನು ಪ್ರಸ್ತುತಪಡಿಸಿತು. ಭಾರತೀಯ ಸಂಸ್ಕೃತಿಯು ಪ್ರಪಂಚದಾದ್ಯಂತ ಹೇಗೆ ಪ್ರಭಾವ ಬೀರುತ್ತಿದೆ ಎಂಬುದು ಶ್ಲಾಘನೀಯ" ಎಂದು ಹೇಳಿದರು.
ವಿಶ್ವ ವಿದ್ಯಾ ಗುರುಕುಲಂನ ವಿದ್ಯಾರ್ಥಿಗಳಿಂದ ಪ್ರಸ್ತುತಿ:ವೇದಾಂತ ಮತ್ತು ಸಂಸ್ಕೃತದ ಕಲಿಕೆಗೆ ಮೀಸಲಾಗಿರುವ ಬ್ರೆಜಿಲ್ ಸಂಸ್ಥೆಯಾದ ವಿಶ್ವ ವಿದ್ಯಾ ಗುರುಕುಲಂನ ವಿದ್ಯಾರ್ಥಿಗಳು ರಾಮಾಯಣವನ್ನು ಪ್ರದರ್ಶಿಸಿದರು. ವಿಶ್ವ ವಿದ್ಯಾ ಗುರುಕುಲಂನ ಸ್ಥಾಪಕ, ಆಚಾರ್ಯ ವಿಶ್ವನಾಥ್ ಎಂದೂ ಕರೆಯಲ್ಪಡುವ ಜೋನಸ್ ಮಾಸೆಟ್ಟಿ ಅವರು 'ಸಂಸ್ಕೃತ ಮಂತ್ರ' ಪಠಿಸುವ ಮೂಲಕ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದರು.
ಎಎನ್ಐ ಜೊತೆ ಮಾತನಾಡಿದ ಮಾಸೆಟ್ಟಿ, "ರಾಮಾಯಣವು 'ಧರ್ಮ'ಕ್ಕೆ ಸಲ್ಲಿಸುವ ಗೌರವವಾಗಿದೆ. ರಾಮನು ಧರ್ಮವನ್ನು ಪ್ರತಿನಿಧಿಸುತ್ತಾನೆ ಮತ್ತು ರಾಮಾಯಣವನ್ನು ಪ್ರತಿನಿಧಿಸುತ್ತಾನೆ. ರಾಮನ ಕಥೆಯೊಂದಿಗೆ ಸಂಪರ್ಕದಲ್ಲಿರುವುದು ನಮ್ಮನ್ನು ಶುದ್ಧೀಕರಿಸುವ ಮತ್ತು ಉತ್ತಮ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವ ಒಂದು ಮಾರ್ಗವಾಗಿದೆ. ರಾಮಾಯಣದ ಕಥಾನಕ ಪ್ರದರ್ಶನ ತಯಾರಿಯು ಆರು ವರ್ಷಗಳನ್ನು ತೆಗೆದುಕೊಂಡಿತು. ಆರಂಭದಲ್ಲಿ, ನಾವು ತುಂಬಾ ಹೆದರುತ್ತಿದ್ದೆವು ಮತ್ತು ಭಾವನಾತ್ಮಕವಾಗಿದ್ದೆವು." ಎಂದು ಹೇಳಿದರು.
’ನಿಮ್ಮ ಧರ್ಮದೊಳಗಡೆಯೇ ಬಹಳ ಒಳ್ಳೆಯ ಸಂಸ್ಕೃತಿ ಇದೆ’:ರಾಮಾಯಣದ ಪ್ರದರ್ಶನದಿಂದ ಪ್ರಧಾನಿ ಮೋದಿ ತುಂಬಾ ಸಂತೋಷಗೊಂಡಿದ್ದಾರೆ ಎಂದು ಮಾಸೆಟ್ಟಿ ಹೇಳಿದರು. "ಪ್ರಧಾನಿಯವರ ಮುಂದೆ ರಾಮಾಯಣವನ್ನು ಪ್ರದರ್ಶಿಸಿರುವುದು ಖುಷಿಯಾಗಿದೆ. ಆದರೆ ಭಾರತದ ಯುವಕರು ವೈದಿಕ ಸಂಪ್ರದಾಯ ಮತ್ತು ಎಲ್ಲಾ ಹಳೆಯ ವಿಧಾನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ತಿಳಿದು ತುಂಬಾ ದುಃಖವಾಗುತ್ತದೆ. ಪಾಶ್ಚಿಮಾತ್ಯರ ಮಾರ್ಗವು ತುಂಬಾ ಶುಷ್ಕ ಮತ್ತು ತುಂಬಾ ಕಳಪೆಯಾಗಿದೆ. ಆದ್ದರಿಂದ ಅದಕ್ಕೆ ಬಲಿಯಾಗಬೇಡಿ ಎಂದು ನಾನು ನಿಮಗೆ ಹೇಳ ಬಯಸುತ್ತೇನೆ. ನಿಮ್ಮ ಧರ್ಮದೊಳಗಡೆಯೇ ಬಹಳ ಒಳ್ಳೆಯ ಸಂಸ್ಕೃತಿ ಇದೆ" ಎಂದು ಅವರು ತಿಳಿಸಿದರು.
ಜಿ 20 ನಾಯಕ ಶೃಂಗಸಭೆಯಲ್ಲಿ ಮೋದಿ ಭಾಗಿ:ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಬ್ರೆಜಿಲ್ ನಲ್ಲಿ ನಡೆದ ಜಿ 20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು ಮತ್ತು ವಿವಿಧ ಸಂವಾದಗಳನ್ನು ನಡೆಸಿದರು. ಬ್ರೆಜಿಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಾವು ವೀಕ್ಷಿಸಿದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ಶ್ಲಾಘಿಸಿದರು ಮತ್ತು ಭಾರತೀಯ ಸಂಸ್ಕೃತಿಯ ಆಳ ಮತ್ತು ವೈವಿಧ್ಯತೆಯ ಬಗ್ಗೆ ಗಮನ ಸೆಳೆದರು.
ಇದನ್ನೂ ಓದಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾದ ಜೈಶಂಕರ್: ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಚರ್ಚೆ