ವಿಯೆಂಟಿಯಾನ್, ಲಾವೋಸ್: ಆಸಿಯಾನ ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ, ಶುಕ್ರವಾರ ವಿಯೆಂಟಿಯಾನ್‌ನಲ್ಲಿ ಲಾವೋಸ್ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಉಭಯ ಪ್ರಧಾನ ಮಂತ್ರಿಗಳು ಭಾರತ - ಲಾವೋಸ್ ನಾಗರಿಕತೆ ಮತ್ತು ಸಮಕಾಲೀನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದರು. ಅಭಿವೃದ್ಧಿ ಪಾಲುದಾರಿಕೆ, ವಿಪತ್ತು ನಿರ್ವಹಣೆ, ನವೀಕರಿಸಬಹುದಾದ ಇಂಧನ, ಪರಂಪರೆಯ ಮರುಸ್ಥಾಪನೆ, ಆರ್ಥಿಕ ಸಂಬಂಧಗಳು, ರಕ್ಷಣಾ ಸಹಯೋಗ ಮತ್ತು ಜನರ ನಡುವಿನ ಸಂಬಂಧಗಳ ವೃದ್ಧಿ ಸಂಬಂಧಿಸಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ನೆರವಿನ ಅಡಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವ್ಯಾಟ್ ಫೌನ ಪುನಃಸ್ಥಾಪನೆ ಮತ್ತು ಸಂರಕ್ಷಣೆ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು ಎಂದು ಎಂಇಎ ಹೇಳಿದೆ. ಪಿಎಂ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಗುರುವಾರ ಲಾವೋಸ್‌ಗೆ ಆಗಮಿಸಿದರು. 21 ನೇ ಆಸಿಯಾನ್-ಭಾರತ ಮತ್ತು 19 ನೇ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಅವರು ಭಾಗವಹಿಸಿದರು. ಶೃಂಗಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಲಾವೊ ಪ್ರಧಾನಿಯನ್ನು ಪ್ರಧಾನಿ ಮೋದಿ ಇದೇ ವೇಳೆ ಅಭಿನಂದಿಸಿದರು.
ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ದೇಶಗಳ ನಡುವಿನ ನಿಕಟ ಸಹಕಾರದ ಬಗ್ಗೆ ಉಭಯ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ಪಿಎಂ ಸಿಫಾಂಡೋನ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪಾತ್ರದ ಬಗ್ಗೆ ಗುಣಗಾನ ಮಾಡಿದರು. 2024 ಕ್ಕೆ ಲಾವೊ ಪಿಡಿಆರ್‌ನ ಆಸಿಯಾನ್ ಅಧ್ಯಕ್ಷ ಸ್ಥಾನವನ್ನು ಭಾರತವು ಬಲವಾಗಿ ಬೆಂಬಲಿಸಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾತುಕತೆಯ ಬಳಿಕ, ರಕ್ಷಣಾ, ಪ್ರಸಾರ, ಕಸ್ಟಮ್ಸ್ ಸಹಕಾರ ಮತ್ತು ಮೆಕಾಂಗ್-ಗಂಗಾ ಸಹಕಾರದ ಅಡಿ ಮೂರು ಕ್ವಿಕ್ ಇಂಪ್ಯಾಕ್ಟ್ ಪ್ರಾಜೆಕ್ಟ್‌ಗಳ (ಕ್ಯೂಐಪಿ) ಕ್ಷೇತ್ರಗಳಲ್ಲಿನ ತಿಳಿವಳಿಕೆ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. QIP ಗಳು ಲಾವೊ ರಾಮಾಯಣದ ಪರಂಪರೆಯ ಸಂರಕ್ಷಣೆ, ರಾಮಾಯಣಕ್ಕೆ ಸಂಬಂಧಿಸಿದ ಭಿತ್ತಿಚಿತ್ರಗಳೊಂದಿಗೆ ವಾಟ್ ಪಾಕಿಯಾ ಬೌದ್ಧ ದೇವಾಲಯದ ಪುನಃಸ್ಥಾಪನೆ ಮತ್ತು ಚಂಪಾಸಕ್ ಪ್ರಾಂತ್ಯದಲ್ಲಿ ರಾಮಾಯಣದ ನೆರಳು ಬೊಂಬೆಯಾಟ ರಂಗಮಂದಿರಕ್ಕೆ ಬೆಂಬಲವನ್ನು ನೀಡುತ್ತದೆ.
ಎಲ್ಲಾ ಮೂರು QIP ಗಳು 50000 ಅಮೆರಿಕನ್ ಡಾಲರ್ ಅನುದಾನದ ಸಹಾಯವನ್ನು ಹೊಂದಿವೆ. ಲಾವೊ PDR ನಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಸುಧಾರಿಸಲು ಭಾರತವು ಸುಮಾರು 1 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನವನ್ನು ನೀಡುತ್ತದೆ.
ಇದನ್ನು ಓದಿ:ಬಾಂಗ್ಲಾದೇಶದ ಜೆಶೋರೇಶ್ವರಿ ದೇಗುಲಕ್ಕೆ ಪ್ರಧಾನಿ ಮೋದಿ ಕಾಣಿಕೆಯಾಗಿ ನೀಡಿದ್ದ ಕಿರೀಟ ಕಳ್ಳತನ