ಅಬುಜಾ(ನೈಜೀರಿಯಾ):ಶನಿವಾರದಿಂದ 3 ದೇಶಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೈಜೀರಿಯಾ ರಾಜಧಾನಿ ಅಬುಜಾಕ್ಕೆ ಬಂದಿಳಿದರು. ಮೋದಿ ಅವರನ್ನು ಅಬುಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೇಸಮ್ ಎಜ್ನಾವೋ ವೈಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಮೋದಿ ವಿಮಾನದಿಂದ ಕೆಳಗಿಳಿಯುತ್ತಿದ್ದಂತೆ 'ಕೀ ಟು ದ ಸಿಟಿ' (ಅಬುಜಾ ನಗರದ ಕೀಲಿಕೈ) ನೀಡಿದ ಅವರು ವಿಶೇಷ ಗೌರವ ನೀಡಿದರು. ಈ ರೀತಿ ಕೀಲಿ ಕೈ ನೀಡುತ್ತಿರುವುದು ನೈಜೀರಿಯಾ ಜನರ ನಂಬಿಕೆ ಮತ್ತು ಗೌರವದ ಪ್ರತೀಕವಾಗಿದೆ.
ತಮ್ಮ ಭೇಟಿಯ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ, "ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವುದು ಈ ಪ್ರವಾಸದ ಉದ್ದೇಶ" ಎಂದು ತಿಳಿಸಿದ್ದಾರೆ. "ಸ್ವಲ್ಪ ಹೊತ್ತಿಗೆ ಮುನ್ನ ನೈಜೀರಿಯಾಕ್ಕೆ ಬಂದಿಳಿದೆ. ಆತ್ಮೀಯ ಸ್ವಾಗತಕ್ಕೆ ಆಭಾರಿ. ಈ ಭೇಟಿ ಉಭಯ ದೇಶಗಳ ಗೆಳೆತನವನ್ನು ಇನ್ನಷ್ಟು ಗಾಢವಾಗಿಸಲಿ" ಅವರು ತಿಳಿಸಿದ್ದಾರೆ.
ನೈಜೀರಿಯಾ ಅಧ್ಯಕ್ಷ ಬೊಲಾ ಅಹಮ್ಮದ್ ತಿನುಬು 'ಎಕ್ಸ್' ಖಾತೆಯಲ್ಲಿ ಪ್ರತಿಕ್ರಿಯಿಸಿ, "ಪ್ರಧಾನಿ ಮೋದಿ ಅವರನ್ನು ನೈಜೀರಿಯಾಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ. 2007ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಆಗಮಿಸಿದ್ದಾರೆ. ಈ ಭೇಟಿಯಿಂದ ಉಭಯ ದೇಶಗಳ ಸಂಬಂಧವೃದ್ಧಿಸಲಿದೆ" ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮೋದಿ ಅಬುಜಾಕ್ಕೆ ಆಗಮಿಸುತ್ತಿದ್ದಂತೆ, ಭಾರತೀಯ ಸಮುದಾಯದವರು ಅದ್ಧೂರಿ ಸ್ವಾಗತ ಕೋರಿದರು. ಅನೇಕರು ಭಾರತದ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು. 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆಗಳನ್ನು ಕೂಗಿದರು.