ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಮೋದಿ-ಬೈಡನ್‌ ಭೇಟಿ; ಜಾಗತಿಕ, ಪ್ರಾದೇಶಿಕ ವಿಚಾರ ವಿನಿಮಯ - PM Modi US Tour

ಮಹತ್ವದ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶನಿವಾರ ಫಿಲಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ದಿರಿಸಿನಲ್ಲಿ ಅಲ್ಲಿ ಸೇರಿದ್ದ ಭಾರತೀಯ ಸಮುದಾಯದವರು ಅದ್ಧೂರಿ ಸ್ವಾಗತ ಕೋರಿದರು. ನಂತರ ಮೋದಿ ವಿಲ್ಮಿಂಗ್ಟನ್‌ನಲ್ಲಿರುವ ಜೋ ಬೈಡನ್‌ ನಿವಾಸಕ್ಕೆ ತೆರಳಿದರು. ತಮ್ಮ ನಿವಾಸಕ್ಕೆ ಆಗಮಿಸಿದ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಬೈಡನ್, ಕೈ ಹಿಡಿದುಕೊಂಡು ತಮ್ಮ ನಿವಾಸದೊಳಗೆ ಕರೆದುಕೊಂಡು ಹೋದರು. ನಂತರ ಉಭಯ ನಾಯಕರು ಜಾಗತಿಕ ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದರು.

ಕ್ವಾಡ್ ಶೃಂಗಸಭೆ
ಕ್ವಾಡ್ ಶೃಂಗಸಭೆ: ಅಮೆರಿಕದಲ್ಲಿ ಪ್ರಧಾನಿ ಮೋದಿ (ETV Bharat)

By ETV Bharat Karnataka Team

Published : Sep 22, 2024, 8:39 AM IST

Updated : Sep 22, 2024, 8:54 AM IST

ವಿಲ್ಮಿಂಗ್ಟನ್(ಯುಎಸ್ಎ):ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು, ಶನಿವಾರ ಡೆಲವೇರ್‌ನ ವಿಲ್ಮಿಂಗ್ಟನ್‌ಗೆ ಆಗಮಿಸಿದರು. ಅಧ್ಯಕ್ಷ ಜೋ ಬೈಡನ್ ತಮ್ಮ ನಿವಾಸಕ್ಕೆ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ಪರಸ್ಪರ ಆಲಿಂಗನ ಮಾಡಿಕೊಂಡರು. ಮೋದಿಯ ಕೈ ಹಿಡಿದುಕೊಂಡು ಬೈಡನ್ ತಮ್ಮ ನಿವಾಸಕ್ಕೆ ಕರೆದೊಯ್ದರು. ನಂತರ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳು ಹಾಗು ಜಾಗತಿಕ, ಪ್ರಾದೇಶಿಕ, ಇಂಡೋ-ಫೆಸಿಫಿಕ್ ಮತ್ತು ಅದರ ಹೊರತಾದ ಅನೇಕ ವಿಚಾರಗಳ ವಿನಿಮಯ ಮಾಡಿಕೊಂಡರು.

ಇದಕ್ಕೂ ಮುನ್ನ ಫಿಲಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು ಭಾರತೀಯ ಸಮುದಾಯದವರು ಆತ್ಮೀಯವಾಗಿ ಸ್ವಾಗತಿಸಿದರು. ಮೋದಿಯನ್ನು ಸ್ವಾಗತಿಸಲು ಭಾರತೀಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿದ್ದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು 'ಮೋದಿ, ಮೋದಿ' ಎಂಬ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಪ್ರಧಾನಿ ಕೆಲವರ ಕೈ ಕುಲುಕಿ ಇನ್ನು ಕೆಲವರಿಗೆ ಆಟೋಗ್ರಾಫ್ ನೀಡಿದರು. ನಂತರ ಮೋದಿ ವಿಲ್ಮಿಂಗ್ಟನ್‌ಗೆ ಪ್ರಯಾಣ ಬೆಳೆಸಿದರು.

ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಬೈಡನ್, 'ಇತಿಹಾಸದಲ್ಲೇ ಇದೀಗ ಭಾರತದೊಂದಿಗೆ ಅಮೆರಿಕ ಶಕ್ತಿಯುತ, ನಿಕಟ ಪಾಲುದಾರಿಕೆ ಹೊಂದಿದೆ. ಪ್ರತಿ ಬಾರಿ ನಾವು ಒಟ್ಟಿಗೆ ಕುಳಿತಾಗ ನನಗೆ ಹೊಸ ಪ್ರದೇಶಗಳಲ್ಲಿ ನಮ್ಮ ಸಹಕಾರದ ಕುರಿತು ಹೊಳೆಯುತ್ತದೆ. ಈ ನಿಟ್ಟಿನಲ್ಲಿ ಇವತ್ತಿನ ದಿನವೂ ಹೊರತಲ್ಲ' ಎಂದು ತಿಳಿಸಿದ್ದಾರೆ.

ಕ್ವಾಡ್ ಶೃಂಗಸಭೆಗೂ ಮುನ್ನ ಇಬ್ಬರು ನಾಯಕರು ಪರಸ್ಪರ ಭೇಟಿ ಮಾಡಿದರು. ಎರಡೂ ದೇಶಗಳ ಸಮಾನ ಆಸಕ್ತಿಯ ಕ್ಷೇತ್ರಗಳು ಮತ್ತು ಜಾಗತಿಕ, ಪ್ರಾದೇಶಿಕ ಹಾಗು ಇಂಡೋ-ಫೆಸಿಫಿಕ್ ವ್ಯಾಪ್ತಿ ಹಾಗು ಅದರ ಹೊರತಾದ ವಿಚಾರಗಳು ಚರ್ಚೆಯಾದವು ಎಂದು ಭಾರತ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ತಮ್ಮ ನಿವಾಸಕ್ಕೆ ಆತ್ಮೀಯವಾಗಿ ಸ್ವಾಗತಿಸಿದ ಬೈಡನ್ ಅವರಿಗೆ ಧನ್ಯವಾದ ತಿಳಿಸಿದ ಮೋದಿ, 'ನಮ್ಮ ಮಾತುಕತೆಗಳು ಅತ್ಯಂತ ಫಲಪ್ರದವಾಗಿವೆ. ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿತು' ಎಂದು 'ಎಕ್ಸ್‌'ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವತ್ರ ಪ್ರಧಾನಿ ಜೊತೆಗಿದ್ದರು. ಅಮೆರಿಕದ ತಂಡದಲ್ಲಿ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕನ್, ರಾಷ್ಟ್ರೀಯ ಭದ್ರತಾ ವಿಚಾರಗಳಲ್ಲಿ ಅಮೆರಿಕ ಅಧ್ಯಕ್ಷರಿಗೆ ಸಲಹೆ ನೀಡುವ ಟಿ.ಹೆಚ್.ಜೆಕ್ ಸಲ್ಲಿವನ್, ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗರ್ಸೆಟ್ಟಿ ಇದ್ದರು.

ಕ್ವಾಡ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯಾ ಕಿಶಿಡಾ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಈ ಬಾರಿಯ ಕ್ವಾಡ್ ಶೃಂಗಸಭೆಯನ್ನು ಅಧ್ಯಕ್ಷ ಬೈಡನ್ ಅವರ ತವರು ವಿಲ್ಮಿಂಗ್ಟನ್‌ನಲ್ಲಿ ಆಯೋಜಿಸಲಾಗಿದ್ದು, ಇಂಡೋ-ಫೆಸಿಫಿಕ್ ವಲಯದಲ್ಲಿ ಸಹಕಾರ ಮತ್ತು ಉಕ್ರೇನ್, ಗಾಜಾ ಸಂಘರ್ಷಕ್ಕೆ ಶಾಂತಿಯುತ ಹರಿಹಾರ ಕೈಗೊಳ್ಳಲು ಬೇಕಿರುವ ದಾರಿಗಳ ಕುರಿತು ಶೃಂಗದಲ್ಲಿ ಹಲವು ಹೊಸ ಕ್ರಮಗಳು ಘೋಷಣೆಯಾಗುವ ನಿರೀಕ್ಷೆ ಮೂಡಿಸಿದೆ.

ನಾಲ್ಕು ಸದಸ್ಯ ರಾಷ್ಟ್ರಗಳ ಕ್ವಾಡ್ ಗುಂಪು (Quadrilateral Security Dialogue) ಇಂಡೋ-ಫೆಸಿಫಿಕ್ ವಲಯದಲ್ಲಿ ಮುಕ್ತ, ಎಲ್ಲರನ್ನೂ ಒಳಗೊಳ್ಳುವ ವಾತಾವರಣವನ್ನು ಪ್ರತಿಪಾದಿಸುತ್ತದೆ. ಆದರೆ ಚೀನಾ ಈ ಗುಂಪು ತನ್ನ ಬೆಳವಣಿಗೆಗೆ ತಡೆಯೊಡ್ಡುವ ಗುರಿ ಹೊಂದಿದೆ ಎಂದು ಆರೋಪಿಸುತ್ತಿದೆ.

ವಿಲ್ಲಿಂಗ್ಟನ್‌ನಿಂದ ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದು, ಭಾನುವಾರ ಲಾಂಗ್‌ ಐಲ್ಯಾಂಡ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಇದಾದ ಮರುದಿನ(ಸೋಮವಾರ) ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 'ಭವಿಷ್ಯದ ಶೃಂಗಸಭೆ'ಯ ಕುರಿತು ಭಾಷಣ ಮಾಡುವರು. ವಿವಿಧ ಅಮೆರಿಕದ ಕಂಪೆನಿಗಳ ಮುಖ್ಯಸ್ಥರ ಜೊತೆಗೆ ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ(ಎಐ) ಹಾಗು ಸೆಮಿಕಂಡಕ್ಟರ್‌ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ:ಒಂದು ರಾಷ್ಟ್ರ, ಒಂದು ಚುನಾವಣೆ ದೇಶಕ್ಕೆ ಅಪಾಯಕಾರಿ: ಕಮಲ್​ ಹಾಸನ್​​ - One nation one election

Last Updated : Sep 22, 2024, 8:54 AM IST

ABOUT THE AUTHOR

...view details