ಮಾಸ್ಕೋ(ರಷ್ಯಾ):ಯುಕ್ರೇನ್ ಜೊತೆಗಿನ ಸಂಘರ್ಷಕ್ಕೆ ಯುದ್ಧಭೂಮಿಯಲ್ಲಿ ಪರಿಹಾರ ಸಾಧ್ಯವಿಲ್ಲ. ಬಾಂಬ್‌ಗಳು, ಬುಲೆಟ್‌ಗಳ ಮಧ್ಯೆ ಶಾಂತಿ ಪ್ರಯತ್ನಗಳು ಯಶಸ್ವಿಯಾಗಲಾರವು ಎಂದು ಪ್ರಧಾನಿ ನರೇಂದ್ರ ಮೋದಿ, ರಷ್ಯಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶಾಂತಿ ಸಂದೇಶ ನೀಡಿದ್ದಾರೆ.
ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ 'ಕ್ರೆಮ್ಲಿನ್'ನಲ್ಲಿ ಮಂಗಳವಾರ ಪುಟಿನ್ ಜೊತೆಗಿನ ಮಾತುಕತೆಯ ಆರಂಭಿಕ ಭಾಷಣದಲ್ಲಿ ಮೋದಿ, ಉಕ್ರೇನ್‌ನ ಕೀವ್‌ನಲ್ಲಿರುವ ಮಕ್ಕಳ ಆಸ್ಪತ್ರೆಯ ಮೇಲೆ ಕ್ಷಿಪಣಿ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಘಟನೆಯಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದರು.
''ಯುದ್ಧ, ಯಾವುದೇ ಸಂಘರ್ಷ ಅಥವಾ ಭಯೋತ್ಪಾದಕ ಕೃತ್ಯಗಳನ್ನೇ ತೆಗೆದುಕೊಳ್ಳಿ. ಮಾನವೀಯತೆಯನ್ನು ನಂಬುವ ಯಾವುದೇ ವ್ಯಕ್ತಿಯೂ ಜನರು ಸತ್ತಾಗ ಮತ್ತು ವಿಶೇಷವಾಗಿ ಮುಗ್ಧ ಮಕ್ಕಳು ಸತ್ತಾಗ ನೋವು ಅನುಭವಿಸುತ್ತಾನೆ. ಇಂತಹ ನೋವನ್ನು ಅನುಭವಿಸಿದಾಗ ಹೃದಯ ಛಿದ್ರವಾಗುತ್ತದೆ. ನಿನ್ನೆ ನಿಮ್ಮೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು'' ಎಂದು ಮೋದಿ ತಿಳಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಪ್ರದಾನ ಮಾಡಿದ ಪುಟಿನ್
ರಷ್ಯಾ-ಉಕ್ರೇನ್ ಯುದ್ಧದ ನಡುವೆ 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಮೋದಿ ಎರಡು ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದರು. ಈ ವೇಳೆ, ಪುಟಿನ್ ಅವರನ್ನು ತಬ್ಬಿಕೊಂಡಿದ್ದಕ್ಕಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಸಮಾಧಾನ ಹೊರಹಾಕಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಮೋದಿ ಯುದ್ಧದ ಬಗೆಗಿನ ಸ್ಪಷ್ಟ ನಿಲುವು ತಿಳಿಸಿದ್ದಾರೆ.
''ಉಕ್ರೇನ್ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಏಕೈಕ ಮಾರ್ಗ. ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡಲು ಭಾರತ ಸಿದ್ಧವಿದೆ'' ಎಂದು ಮೋದಿ ಪುನರುಚ್ಚರಿಸಿದರು.
''ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಅತ್ಯಗತ್ಯ. ಯುದ್ಧಭೂಮಿಯಲ್ಲಿ ಯಾವುದೇ ಪರಿಹಾರ ಸಾಧ್ಯವಿಲ್ಲ. ಬಾಂಬ್, ಬಂದೂಕು ಮತ್ತು ಗುಂಡುಗಳ ಮಧ್ಯೆ ಪರಿಹಾರ ಮತ್ತು ಶಾಂತಿ ಮಾತುಕತೆ ಯಶಸ್ವಿಯಾಗುವುದಿಲ್ಲ. ನಾವು ಮಾತುಕತೆಯ ಮೂಲಕ ಶಾಂತಿಯ ಹಾದಿಯನ್ನು ಕಂಡುಕೊಳ್ಳಬೇಕು'' ಎಂದೂ ಅವರು ಕರೆ ನೀಡಿದ್ದಾರೆ.
ಝೆಲೆನ್ಸ್ಕಿ ಆಕ್ಷೇಪ: ರಷ್ಯಾ ಅಧ್ಯಕ್ಷ ನಾಯಕ ಪುಟಿನ್ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡಿದ್ದಕ್ಕೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ರಷ್ಯಾದ ಕ್ಷಿಪಣಿಯು ಉಕ್ರೇನ್‌ನ ಅತಿದೊಡ್ಡ ಮಕ್ಕಳ ಆಸ್ಪತ್ರೆಗೆ ಅಪ್ಪಳಿಸಿದೆ. ಅವಶೇಷಗಳಡಿ ಅನೇಕರು ಹೂತು ಹೋಗಿದ್ದಾರೆ. ಇಂತಹ ದಿನ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕ ಮಾಸ್ಕೋದಲ್ಲಿ ವಿಶ್ವದ ಅತ್ಯಂತ ರಕ್ತಸಿಕ್ತ ಅಪರಾಧಿಯನ್ನು ತಬ್ಬಿಕೊಳ್ಳುವುದನ್ನು ನೋಡುವುದು ಶಾಂತಿಯ ಪ್ರಯತ್ನಗಳಿಗೆ ಭಾರೀ ನಿರಾಶೆ ಉಂಟುಮಾಡಿದೆ'' ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಪ್ರತಿಕ್ರಿಯೆ:ಮೋದಿ ಮತ್ತು ಪುಟಿನ್ ನಡುವಿನ ಮಾತುಕತೆಗೂ ಮುನ್ನ ಅಮೆರಿಕ ಪ್ರತಿಕ್ರಿಯಿಸಿ, "ನಾವು ಯಾವುದೇ ದೇಶವು ರಷ್ಯಾದೊಂದಿಗೆ ತೊಡಗಿಸಿಕೊಂಡಾಗ ಉಕ್ರೇನ್‌ನಲ್ಲಿನ ಸಂಘರ್ಷ ಕುರಿತು ತೆಗೆದುಕೊಂಡ ಯಾವುದೇ ನಿರ್ಣಯದ ಬಗೆಗಿನ ಯುಎನ್ (ವಿಶ್ವಸಂಸ್ಥೆ) ಚಾರ್ಟರ್ ಗೌರವಿಸುವ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸಲು ಭಾರತವನ್ನು ಒತ್ತಾಯಿಸುತ್ತೇವೆ. ಇದು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ, ಉಕ್ರೇನ್‌ನ ಸಾರ್ವಭೌಮತ್ವವನ್ನು ಗೌರವಿಸುತ್ತದೆ'' ಎಂದು ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ವಾಷಿಂಗ್ಟನ್‌ನಲ್ಲಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಆಸ್ಟ್ರಿಯಾಗೆ ಬಂದಿಳಿದ ನರೇಂದ್ರ ಮೋದಿ; 40 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಭೇಟಿ, ಅದ್ಧೂರಿ ಸ್ವಾಗತ