ನ್ಯೂಯಾರ್ಕ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಮುಖ ಟೆಕ್ ಕಂಪನಿಗಳ ಸಿಇಒಗಳೊಂದಿಗೆ ಭಾನುವಾರ 'ಫಲಪ್ರದ' ಮಾತುಕತೆ ನಡೆಸಿದರು. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಹಲವು ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರದ ಉಪಕ್ರಮಗಳ ಕುರಿತು ಈ ವೇಳೆ ಅವರು ಚರ್ಚಿಸಿದ್ದಾರೆ.
ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್ನಲ್ಲಿ ಟೆಕ್ ಸಿಇಒಗಳೊಂದಿಗೆ ಮೋದಿ ದುಂಡುಮೇಜಿನ ಸಭೆ ನಡೆಸಿದರು. ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಟೆಕ್ ಕಂಪನಿಗಳ ಮುಖ್ಯಸ್ಥರು ಸಭೆಯಲ್ಲಿದ್ದರು.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರಧಾನಿ ಮೋದಿ, 'ನ್ಯೂಯಾರ್ಕ್ನಲ್ಲಿ ಟೆಕ್ ಸಿಇಒಗಳೊಂದಿಗೆ ದುಂಡುಮೇಜಿನ ಫಲಪ್ರಭ ಸಭೆ ನಡೆಸಲಾಯಿತು. ತಂತ್ರಜ್ಞಾನ, ಆವಿಷ್ಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದೆವು. ಈಗಾಗಲೇ ಈ ಕ್ಷೇತ್ರದಲ್ಲಿ ಭಾರತ ದಾಪುಗಾಲಿಟ್ಟಿದೆ' ಎಂದು ತಿಳಿಸಿದ್ದಾರೆ.
ಮೆಸಚ್ಯೂಸೆಟ್ ಇನ್ಸುಟಿಟ್ಯೂಟ್ ಆಫ್ ಟೆಕ್ನಾಲಾಜಿ (ಎಂಐಟಿ) ಸ್ಕೂಲ್ ಆಫ್ ಇಂಜಿನಿಯರಿಂಗ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.