ಪ್ಯಾರಿಸ್, ಫ್ರಾನ್ಸ್ :ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಮೂರು ದಿನಗಳ ಭೇಟಿ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಸಹ - ಅಧ್ಯಕ್ಷತೆ ವಹಿಸುವ ಮೊದಲು ನಡೆದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭರ್ಜರಿ ಸ್ವಾಗತ ಕೋರಿದರು.
ನನ್ನ ಸ್ನೇಹಿತ, ಅಧ್ಯಕ್ಷ ಮ್ಯಾಕ್ರನ್ ರನ್ನು ಭೇಟಿಯಾಗಲು ಸಂತೋಷವಾಗಿದೆ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಫ್ರೆಂಚ ಅಧ್ಯಕ್ಷರು ಔತಣಕೂಟ ಏರ್ಪಡಿಸಿದ್ದರು. AI ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಫ್ರಾನ್ಸ್‌ನಲ್ಲಿರುವ US ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರನ್ನು ಪ್ರಧಾನಿ ಮೋದಿ ಇದೇ ವೇಳೆ ಭೇಟಿಯಾದರು.
ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಪೋಸ್ಟ್ ಮಾಡಿದೆ. ಪ್ರಧಾನಿ ಮೋದಿ ಅವರು, ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್ ಹಾಗೂ ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ ಅವರೊಂದಿಗೆ ಸಂವಾದ ನಡೆಸಿದರು ಎಂದು ಮಾಹಿತಿ ನೀಡಿದೆ. ಪ್ರಧಾನಿ ಮೋದಿ ಫ್ರಾನ್ಸ್ ಪ್ರವಾಸದ ಹಿನ್ನೆಲೆಯಲ್ಲಿ ಸೋಮವಾರ ಪ್ಯಾರಿಸ್ ಗೆ ಭೇಟಿ ನೀಡಿದ್ದಾರೆ. ಈ ಭೇಟಿ ಬಳಿಕ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ.
ಫ್ರಾನ್ಸ್‌ಗೆ ಮೂರು ದಿನಗಳ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ಯಾರಿಸ್‌ನಲ್ಲಿ ಮ್ಯಾಕ್ರನ್ ಅವರೊಂದಿಗೆ ಎಐ ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ, ಈ ವೇಳೆ ಅವರು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲಿನ ವ್ಯಾಪಾರೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.