ಜಾರ್ಜ್ ಟೌನ್ (ಗಯಾನಾ): ಬುಧವಾರ ಗಯಾನಾಕ್ಕೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಂಕೇತಿಕವಾಗಿ ಜಾರ್ಜ್ ಟೌನ್ ನಗರದ ಕೀಲಿ ಕೈ ನೀಡುವ ಮೂಲಕ ವಿಶಿಷ್ಟವಾಗಿ ಸ್ವಾಗತ ಕೋರಲಾಯಿತು. ಗಯಾನಾದ ಭಾರತೀಯ ಸಮುದಾಯದ ಸದಸ್ಯರಿಂದಲೂ ಅವರಿಗೆ ಭವ್ಯ ಸ್ವಾಗತ ದೊರೆಯಿತು.
ಭಾರತೀಯ ವಲಸಿಗ ಸದಸ್ಯರೊಂದಿಗೆ ಸಂವಾದ:ಗಯಾನಾ ಅಧ್ಯಕ್ಷ ಇರ್ಫಾನ್ ಅಲಿ, ಗ್ರೆನಡಾ ಪ್ರಧಾನಿ ಡಿಕಾನ್ ಮಿಚೆಲ್, ಬಾರ್ಬಡೋಸ್ ಪ್ರಧಾನಿ ಮಿಯಾ ಮೊಟ್ಲೆ ಮತ್ತು ಗಯಾನಾದ ನಾಲ್ವರು ಸಚಿವರು ಗಯಾನಾದ ರಾಜಧಾನಿ ಜಾರ್ಜ್ ಟೌನ್ನ ಹೋಟೆಲ್ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಸಾಂಪ್ರದಾಯಿಕ ನೃತ್ಯ, ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಪ್ರಧಾನಮಂತ್ರಿಯವರು ಗಯಾನಾ ಸರ್ಕಾರದ ವಿವಿಧ ಸಚಿವರು ಮತ್ತು ಭಾರತೀಯ ವಲಸಿಗ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಗಯಾನಾ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದ ಗಯಾನಾದ ಭಾರತೀಯ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಒಬ್ಬರ ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ದೂರವು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ನೀವೆಲ್ಲ ತೋರಿಸಿರುವಿರಿ. ಸಮುದಾಯವು ಗಯಾನಾದ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವುದನ್ನು ನೋಡಿ ಸಂತೋಷವಾಗಿದೆ." ಎಂದು ಬರೆದಿದ್ದಾರೆ.
ಮೋದಿಗೆ ಸಿಕ್ಕಿತು ಅದ್ಧೂರಿ ಸ್ವಾಗತ:ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಇರ್ಫಾನ್ ಅಲಿ, ಪ್ರಧಾನಿ ಮಾರ್ಕ್ ಆಂಥೋನಿ ಫಿಲಿಪ್ಸ್ ಮತ್ತು ಹನ್ನೆರಡಕ್ಕೂ ಹೆಚ್ಚು ಕ್ಯಾಬಿನೆಟ್ ಸಚಿವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. 56 ವರ್ಷಗಳಲ್ಲಿ ದಕ್ಷಿಣ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಪ್ರಧಾನಿ ತಂಗಲಿರುವ ಹೋಟೆಲ್ನಲ್ಲಿ, ಅವರು ಭಾರತೀಯ ವಲಸೆಗಾರರೊಂದಿಗೆ ಸಂವಹನ ನಡೆಸಿದರು.