ಸಾವೊ ಪಾಲೊ, ಬ್ರೆಜಿಲ್: 62 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವು ಶುಕ್ರವಾರ ಬ್ರೆಜಿಲ್ನ ಸಾವೊ ಪಾಲೊದ ಹೊರವಲಯದಲ್ಲಿ ಪತನಗೊಂಡಿದೆ ಎಂದು ಅಲ್ಲಿನ ಸಿವಿಲ್ ಡಿಫೆನ್ಸ್ ಹೇಳಿಕೆ ಉಲ್ಲೇಖಿಸಿ ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.
ಅಂತಾರಾಷ್ಟ್ರೀಯ ಮಾಧ್ಯಮ ನೀಡಿರುವ ಮಾಹಿತಿ ಪ್ರಕಾರ, 61 ಜನರಿದ್ದ ವಿಮಾನವು ಹಲವು ಮನೆಗಳಿಗೆ ಅಪ್ಪಳಿಸಿದೆ ಎಂದು ತಿಳಿದು ಬಂದಿದೆ. Voepass ವಿಮಾನವು ಕ್ಯಾಸ್ಕಾವೆಲ್‌ನಿಂದ ಹೊರಟು ಸಾವೊ ಪಾಲೊಗೆ ತೆರಳುತ್ತಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕ್ಯಾಸ್ಕಾವೆಲ್‌ನಿಂದ ಹೊರಟ ವಿಮಾನ ಸ್ಥಳೀಯ ಸಮಯ ಮಧ್ಯಾಹ್ನ 1:30 ರ ಸುಮಾರಿಗೆ ಸಿಗ್ನಲ್ ಕಳೆದುಕೊಂಡಿತು ಎನ್ನಲಾಗಿದೆ.
ಪ್ರಯಾಣಿಕ ವಿಮಾನದಲ್ಲಿದ್ದ 58 ಪ್ರಯಾಣಿಕರು:ಫ್ಲೈಟ್ 2283 ಅಪಘಾತದ ಸಮಯದಲ್ಲಿ 57 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಅಲ್ಲಿನ ಏರ್‌ಲೈನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ. ಅಪಘಾತ ಹೇಗೆ ಸಂಭವಿಸಿತು ಅಥವಾ ವಿಮಾನದಲ್ಲಿದ್ದ ಜನರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ ಎಂದು ಅಲ್ಲಿನ ನಾಗರಿಕ ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ವಿಮಾನ ಪತನ ದೃಢ ಪಡಿಸಿದ ಬ್ರೆಜಿಲಿಯನ್ ಏರ್‌ಲೈನ್ಸ್;61 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಸಾವೊ ಪಾಲೊ ನಗರದ ಸಮೀಪ ವಿನ್ಹೆಡೊದಲ್ಲಿ ಪತನಗೊಂಡಿದೆ ಎಂದು ಬ್ರೆಜಿಲಿಯನ್ ಏರ್‌ಲೈನ್ಸ್ ಇದೇ ವೇಳೆ ದೃಢಪಡಿಸಿದೆ ಎಂದು ಮತ್ತೊಂದು ಅಂತಾರಾಷ್ಟ್ರೀಯ ಮಾಧ್ಯಮ ಅಲ್ ಜಜೀರಾ ವರದಿ ಮಾಡಿದೆ. ವಿಮಾನದಲ್ಲಿದ್ದವರ ಭವಿಷ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಏರ್‌ಲೈನ್ ಹೇಳಿದೆ.
ದುರಂತದ ಬಗ್ಗೆ ಅಧ್ಯಕ್ಷ ಲೂಯಿಜ್ ಪ್ರತಿಕ್ರಿಯೆ:ಆದರೆ, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು, ದುರಂತದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಶಂಕೆ ಇದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. "ತುಂಬಾ ದುಃಖದ ಸುದ್ದಿ" ಎಂದಿರುವ ಬ್ರೆಜಿಲ್ ಅಧ್ಯಕ್ಷರು ಈ ಬಗ್ಗೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಪಘಾತದ ವಿಡಿಯೋಗಳಲ್ಲಿ ವಿಮಾನವು ಆಕಾಶದಿಂದ ಉರುಳಿ ನೆಲಕ್ಕೆ ಅಪ್ಪಳಿಸುತ್ತಿರುವುದನ್ನು ತೋರಿಸುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದನ್ನು ಓದಿ:ನಾಗಸಾಕಿ ದಿನ 2024: ಪರಮಾಣು ದಾಳಿಯ ಭೀಕರತೆ ನೆನಪಿಸುವ ಈ ದಿನದ ಮಹತ್ವ, ಇತಿಹಾಸವೇನು? - Nagasaki Day 2024