ಬೆಂಗಳೂರು: ವರದಕ್ಷಿಣೆ ಎಂಬ ಪಿಡುಗು ಇಂದಿಗೂ ನಮ್ಮ ಸಮಾಜದಲ್ಲಿ ಜಾರಿಯಲ್ಲಿರುವುದು ದುರುದೃಷ್ಟಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಎಲ್ಲ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದರೂ ಈ ರೀತಿಯ ವರದಕ್ಷಿಣೆ ಸಾವಿನ ಘಟನೆಗಳು ಹಿಮ್ಮುಖವಾಗಿಸುತ್ತಿವೆ ಎಂದು ತಿಳಿಸಿದೆ.
ವರದಕ್ಷಿಣೆ ಕಿರುಕುಳದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ತಮ್ಮ ವಿರುದ್ಧದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಆರೋಪ ಪಟ್ಟಿ ರದ್ದು ಮಾಡುವಂತೆ ಕೋರಿ ಬೆಂಗಳೂರಿನ ನಾಗಸಂದ್ರದ ನಿವಾಸಿ ಸಿ.ವಿ ವಿಕಾಸ್ ಮತ್ತವರ ತಂದೆ ಹಾಗೂ ತಾಯಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಡೆತ್‌ನೋಟ್ ಬರೆದಿಟ್ಟು ಸಾವನ್ನಪ್ಪುವ ಪ್ರಕರಣಗಳಲ್ಲಿ ಯಾರ ಮೇಲೆ ಆರೋಪ ಮಾಡದಿದ್ದರೂ, ಪತಿ ಮತ್ತವರ ಕುಟುಂಬದ ಸದಸ್ಯರ ವಿರುದ್ಧದ ಶಿಕ್ಷೆಯನ್ನು ದೃಢಪಡಿಸಬಹುದಾಗಿದೆ ಎಂಬುದಾಗಿ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಆಂಧ್ರದ ಅನಂತಪುರ ಜಿಲ್ಲೆಯ ಅಗಲಿ ಗ್ರಾಮದ ಆರ್ ರೋಜಾ ಮತ್ತು ನಾಗಸಂದ್ರದ ನಿವಾಸಿ ವಿಕಾಸ್ 2019ರ ಅಕ್ಟೋಬರ್ 24ರಂದು ವಿವಾಹವಾಗಿದ್ದರು. ಬಳಿಕ ಗಂಡನ ಮನೆಯಲ್ಲಿ ನೆಲೆಸಿದ್ದರು. ಕೆಲವು ತಿಂಗಳುಗಳ ಬಳಿಕ ಪತಿ ವಿಕಾಸ್ ಹಾಗೂ ತಂದೆ ಮತ್ತು ತಾಯಿಯೊಂದಿಗಿನ ಸಂಬಂಧ ಹದಗೆಟ್ಟಿತ್ತು. ಸುಮಾರು 13 ತಿಂಗಳ ಬಳಿಕ ರೋಜಾ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದ್ದರು.
ಘಟನೆ ಕುರಿತಂತೆ ಮೃತರ ತಂದೆ ರಾಮಕೃಷ್ಣ ರೆಡ್ಡಿ ಎಂದುವರು ಪೀಣ್ಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಈ ದೂರಿನ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣ ಕೊಲೆ ಆರೋಪದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತ ರೋಜಾ ಅವರು ಡೆತ್ ನೋಟ್ ಬರೆದಿದ್ದರೂ, ಸಾವಿಗೆ ಯಾರನ್ನೂ ಕಾರಣರನ್ನಾಗಿ ಮಾಡಿಲ್ಲ. ಜೊತೆಗೆ, ಅರ್ಜಿದಾರರು ಶ್ರೀಮಂತರಾಗಿದ್ದು ಪತ್ನಿ ಮನೆಯಿಂದ ವರದಕ್ಷಿಣೆಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಅಂಶ ಸುಳ್ಳು. ಹೀಗಾಗಿ ಪ್ರಕರಣ ಮತ್ತು ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಸರ್ಕಾರಿ ಮತ್ತು ದೂರುದಾರರ ಪರ ವಕೀಲರು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಸಹಮತದ ಸಂಬಂಧವಿದೆ ಎಂದ ಮಾತ್ರಕ್ಕೆ ಮಹಿಳೆಯ ಮೇಲೆ ದೌರ್ಜನ್ಯವೆಸಗಲು ಪರವಾನಿಗೆ ನೀಡಿದಂತಾಗದು : ಹೈಕೋರ್ಟ್