ಮನಿಲಾ : ಸಮುದ್ರದಲ್ಲಿ ಎದ್ದ ಎತ್ತರದ ಅಲೆಗಳ ಕಾರಣದಿಂದಾಗಿ ಫಿಲಿಪ್ಪೀನ್ಸ್ನ ತೈಲ ಟ್ಯಾಂಕರ್ವೊಂದು ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದೆ. ನಂತರ ರಾತ್ರಿ ಕೋಸ್ಟ್ ಗಾರ್ಡ್ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಟ್ಯಾಂಕರ್ನ 17 ಸಿಬ್ಬಂದಿಗಳ ಪೈಕಿ 16 ಮಂದಿಯನ್ನು ರಕ್ಷಿಸಲಾಗಿದೆ. ಸದ್ಯ ಈ ಹಡಗಿನಿಂದ ತೈಲ ಸೋರಿಕೆಯಾಗುತ್ತಿದೆಯೇ ಎಂಬುದನ್ನು ಕಂಡು ಹಿಡಿಯಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನಿಸುತ್ತಿದೆ.
ಟೆರ್ರಾ ನೋವಾ ಹೆಸರಿನ ಟ್ಯಾಂಕರ್ ಬಟಾನ್ ಪ್ರಾಂತ್ಯದಿಂದ ಕೇಂದ್ರ ಪ್ರಾಂತ್ಯವಾದ ಇಲೋಯಿಲೊಗೆ ಸುಮಾರು 1.4 ಮಿಲಿಯನ್ ಲೀಟರ್ (3,70,000 ಗ್ಯಾಲನ್) ಕೈಗಾರಿಕಾ ಇಂಧನ ತೈಲವನ್ನು ಹೊತ್ತು ಸಾಗುತ್ತಿತ್ತು. ಸಮುದ್ರದಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡ ನಂತರ ಟ್ಯಾಂಕರ್ ಅನ್ನು ಮರಳಿ ಬಂದರಿಗೆ ಸಾಗಿಸಲು ಸಿಬ್ಬಂದಿ ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಮಧ್ಯರಾತ್ರಿಯ ಹೊತ್ತಿಗೆ ಟ್ಯಾಂಕರ್ ಮುಳುಗಿದೆ ಎಂದು ಕೋಸ್ಟ್ ಗಾರ್ಡ್ ವಕ್ತಾರ ರಿಯರ್ ಅಡ್ಮಿರಲ್ ಅರ್ಮಾಂಡೊ ಬಾಲಿಲೋ ಹೇಳಿದ್ದಾರೆ.
ಮನಿಲಾದಲ್ಲಿ ಇತ್ತೀಚೆಗೆ ಬೀಸಿದ ಚಂಡಮಾರುತದಿಂದಾಗಿ ಕನಿಷ್ಠ 22 ಜನ ಸಾವಿಗೀಡಾಗಿದ್ದರು ಮತ್ತು 5 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಸಮುದ್ರದಲ್ಲಿ ಟ್ಯಾಂಕರ್ ಮುಳುಗಿದ ಸ್ಥಳದಲ್ಲಿ ನೀರಿನ ಮೇಲೆ ಸುಮಾರು 3.7 ಕಿಲೋಮೀಟರ್ (2.3 ಮೈಲಿ) ಉದ್ದದ ತೈಲ ಸೋರಿಕೆ ಆಗಿರುವುದು ವೈಮಾನಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಆದರೆ, ಅದು ಟ್ಯಾಂಕರ್ನ ಇಂಧನ ಟ್ಯಾಂಕ್ನಿಂದ ಸೋರಿಕೆಯಾದ ತೈಲವಿರಬಹುದು ಎಂದು ಅಂದಾಜಿಸಲಾಗಿದೆ.