ಕರ್ನಾಟಕ

karnataka

ETV Bharat / international

ಇರಾನ್​ ನೂತನ ಅಧ್ಯಕ್ಷರಾಗಿ ಪೆಜೆಶ್ಕಿಯಾನ್: ಆಂತರಿಕ, ಬಾಹ್ಯ ಪರಿಣಾಮಗಳೇನು? - New Iranian President - NEW IRANIAN PRESIDENT

ಇರಾನ್​ನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

ಇರಾನ್ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್
ಇರಾನ್ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ (IANS)

By J K Tripathi

Published : Jul 9, 2024, 8:40 PM IST

ಬಹುನಿರೀಕ್ಷಿತ ಇರಾನ್ ಅಧ್ಯಕ್ಷ ಸ್ಥಾನಕ್ಕೆ ಜುಲೈ 6ರಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸುಧಾರಣಾವಾದಿ ದೃಷ್ಟಿಕೋನಗಳಿಗೆ ಹೆಸರುವಾಸಿಯಾದ 69 ವರ್ಷ ವಯಸ್ಸಿನ ಮಸೂದ್ ಪೆಜೆಶ್ಕಿಯಾನ್ ತಮ್ಮ ಸಂಪ್ರದಾಯವಾದಿ ಎದುರಾಳಿ ಸಯೀದ್ ಜಲೀಲಿಯನ್ನು ಸೋಲಿಸಿ ದೇಶದ ಅತ್ಯಂತ ಹಿರಿಯ ವಯಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಸೂದ್ ಪೆಜೆಶ್ಕಿಯಾನ್ ಶೇ 53.7 ರಷ್ಟು ಮತಗಳನ್ನು ಪಡೆದರೆ, ಅವರ ಎದುರಾಳಿ ಸಯೀದ್ ಜಲೀಲಿ ಶೇ 44.3 ರಷ್ಟು ಮತ ಪಡೆದಿದ್ದಾರೆ. ಒಟ್ಟು ಚಲಾವಣೆಯಾದ ಮತಗಳ ಪೈಕಿ ಸುಮಾರು ಶೇ 10 ರಷ್ಟು ಅಧಿಕ ಮತ ಪಡೆದು ಅಥವಾ ಮೂರು ಮಿಲಿಯನ್ ಮತಗಳ ಅಂತರದಿಂದ ಪೆಜೆಶ್ಕಿಯಾನ್ ಜಯ ಗಳಿಸಿದ್ದಾರೆ.

ವೃತ್ತಿಯಿಂದ ನುರಿತ ಹೃದಯ ಶಸ್ತ್ರಚಿಕಿತ್ಸೆ ಸರ್ಜನ್ ಆಗಿರುವ ಪೆಜೆಶ್ಕಿಯಾನ್ ಈ ಮುನ್ನ ಐದು ಬಾರಿ ಇರಾನಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಇವರು ಎರಡು ಕೌಂಟಿಗಳ ಗವರ್ನರ್ ಮತ್ತು ಇರಾನ್​ನ ಆರೋಗ್ಯ ಸಚಿವರಾಗಿದ್ದರು. ಮಾಜಿ ಸುಧಾರಣಾವಾದಿ ಅಧ್ಯಕ್ಷ ರೌಹಾನಿ ಅವರಿಂದ ಪ್ರಭಾವಿತರಾದ ಅವರು ಈ ಹಿಂದೆ ಎರಡು ಬಾರಿ ಇರಾನ್ ಅಧ್ಯಕ್ಷರಾಗುವ ಅವಕಾಶಗಳಿಂದ ವಂಚಿತರಾಗಿದ್ದರು. 2013 ರಲ್ಲಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಬೇಕಾಯಿತು ಮತ್ತು 2021ರಲ್ಲಿ ಅವರ ಉಮೇದುವಾರಿಕೆಯನ್ನು ಗಾರ್ಡಿಯನ್ ಕೌನ್ಸಿಲ್ ತಿರಸ್ಕರಿಸಿತ್ತು.

ಬಲಪ್ರಯೋಗದಿಂದ ಧಾರ್ಮಿಕ ನಂಬಿಕೆಯ ಆಚರಣೆಗಳನ್ನು ಅನುಷ್ಠಾನಕ್ಕೆ ತರುವುದು ವೈಜ್ಞಾನಿಕವಾಗಿ ಅಸಾಧ್ಯ ಎಂದು ಇತ್ತೀಚಿನ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಹೇಳಿದ್ದು ಗಮನಾರ್ಹ. ಈ ಹೇಳಿಕೆಗೆ ಮೂಲಭೂತವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ಚುನಾವಣೆಗಳು ಸ್ಪಷ್ಟವಾಗಿ ಸುಧಾರಣೆ ಮತ್ತು ಸಂಪ್ರದಾಯ ಈ ಎರಡೇ ವಿಷಯಗಳ ಮೇಲೆ ಕೇಂದ್ರಿಕೃತವಾಗಿರುವಂತೆ ಮಾಡಲು ಸಂಸತ್ತಿನ ಸ್ಪೀಕರ್ ಸೇರಿದಂತೆ ಇತರ ಎಲ್ಲಾ ಪ್ರಮುಖ ಅಭ್ಯರ್ಥಿಗಳು ಸಯೀದ್ ಜಲೀಲಿ ಪರವಾಗಿ ಚುನಾವಣೆಯಿಂದ ಹಿಂದೆ ಸರಿದಿದ್ದರು.

ಪೊಲೀಸ್ ಬಲಪ್ರಯೋಗದ ಮೂಲಕ ಹಿಜಾಬ್ ಅನುಷ್ಠಾನವನ್ನು ಜಾರಿಗೆ ತರುವುದರ ವಿರೋಧಿಯಾಗಿರುವ ಪೆಜೆಶ್ಕಿಯಾನ್, ಇಂಟರ್ನೆಟ್ ನಿರ್ಬಂಧಗಳನ್ನು ಕಡಿಮೆ ಮಾಡುವುದಾಗಿ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಬುಡಕಟ್ಟು ಜನರನ್ನು ತಮ್ಮ ಕ್ಯಾಬಿನೆಟ್​ಗೆ ಸೇರಿಸಿಕೊಳ್ಳುವುದಾಗಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಪರಮಾಣು ಮಹತ್ವಾಕಾಂಕ್ಷೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವ ಸಲುವಾಗಿ ಜೆಸಿಪಿಒಎ (ಜಂಟಿ ಸಮಗ್ರ ಕ್ರಿಯಾ ಯೋಜನೆ) ಪುನರುಜ್ಜೀವನಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರಚನಾತ್ಮಕ ಸಂಬಂಧಗಳನ್ನು ಬೆಸೆಯುವ ಮೂಲಕ ಇರಾನ್ ಅನ್ನು ಅದರ ಪ್ರತ್ಯೇಕತೆಯಿಂದ ಹೊರತರುವ ತಮ್ಮ ಉದ್ದೇಶವನ್ನು ಅವರು ಧೈರ್ಯದಿಂದ ಘೋಷಿಸಿದ್ದರು.

ದೇಶಕ್ಕೆ 200 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ಬಂದರೆ ಮಾತ್ರ ದೇಶದಲ್ಲಿ ಏರುತ್ತಿರುವ ಹಣದುಬ್ಬರವನ್ನು (ಪ್ರಸ್ತುತ ಶೇ 40ರಷ್ಟಿದೆ) ನಿಯಂತ್ರಿಸಬಹುದು ಮತ್ತು ವಿಶ್ವದ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳದೇ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ತಮ್ಮ ಎದುರಾಳಿಯೊಂದಿಗಿನ ಚುನಾವಣಾ ಚರ್ಚೆಯಲ್ಲಿ ನಿಯೋಜಿತ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿದ್ದರು. ಅಂದರೆ ಸ್ಪಷ್ಟವಾಗಿ, ಅವರು ಚೀನಾ, ರಷ್ಯಾ ಮತ್ತು ಬೆರಳೆಣಿಕೆಯಷ್ಟು ಸಾಂಪ್ರದಾಯಿಕ ಮಿತ್ರರಾಷ್ಟ್ರಗಳನ್ನು ಮೀರಿ ಇತರ ಪ್ರಮುಖ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವ ಒಲವು ಹೊಂದಿದ್ಧಾರೆ.

ಏತನ್ಮಧ್ಯೆ ಇರಾನ್​ನಲ್ಲಿ ಪೆಜೆಶ್ಕಿಯಾನ್ ಅವರ ವಿಜಯಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರಿಗೆ, ಅವರು ಅಧಿಕಾರಕ್ಕೆ ಏರುವುದು ದೀರ್ಘಕಾಲೀನ ಸುಧಾರಣೆಗಳ ಭರವಸೆಯನ್ನು ಮೂಡಿಸಿದೆ. ವಿಶೇಷವಾಗಿ 2022 ರಲ್ಲಿ ದೇಶಾದ್ಯಂತ ನಡೆದ ಹಿಜಾಬ್ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇದು ಮಹತ್ವದ್ದಾಗಿದೆ. ಅವರು ಯಾವುದೇ ಸುಧಾರಣೆಗಳನ್ನು ತರಲು ಸಾಧ್ಯವಿಲ್ಲ ಎಂಬುದು ಇನ್ನೂ ಕೆಲವರ ಭಾವನೆಯಾಗಿದೆ.

ಖ್ಯಾತ ಇರಾನಿನ ರಾಜಕೀಯ ವಿಶ್ಲೇಷಕ ಮೊಸ್ಸಾಡೆಗ್ ಮೊಸ್ಸಾಡೆಗ್ಪುರ್ ಪ್ರಕಾರ, "ಪೆಜೆಶ್ಕಿಯಾನ್ ದೇಶದಲ್ಲಿ ಕೆಲ ಉತ್ತಮ ಬದಲಾವಣೆಗಳನ್ನು ತರಬಹುದು ಮತ್ತು ಕೆಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಜನ ಪ್ರಸ್ತುತ ಭರವಸೆ ಹೊಂದಿದ್ದಾರೆ. ಆದರೆ ಇಷ್ಟನ್ನು ಬಿಟ್ಟರೆ ದೇಶದ ಮೂಲ ನೀತಿಗಳಲ್ಲಿ ಯಾವುದೇ ತೀವ್ರ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸಾಂವಿಧಾನಿಕ ನಿಬಂಧನೆಗಳು ಮತ್ತು ಸರ್ವೋಚ್ಚ ನಾಯಕ ರಹಬರ್ ಅಯತೊಲ್ಲಾ ಅಲಿ ಖಮೇನಿ ಅವರು ಹೊಂದಿರುವ ಅಪಾರ ಅಧಿಕಾರವನ್ನು ಗಮನಿಸಿದರೆ, ಇಂಟರ್​ನೆಟ್ ನಿರ್ಬಂಧಗಳನ್ನು ತೆರವುಗೊಳಿಸುವುದು, ಕ್ಯಾಬಿನೆಟ್​ನಲ್ಲಿ ಮಹಿಳೆಯರು ಮತ್ತು ಬುಡಕಟ್ಟು ಜನರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಮುಂತಾದ ಕೆಲ ಸಾಮಾಜಿಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆದರೆ, ಹಿಜಾಬ್ ಮತ್ತು ಪೊಲೀಸರ ಬಲ ಪ್ರಯೋಗದಂಥ ಹೆಚ್ಚು ವಿವಾದಾತ್ಮಕ ವಿಷಯಗಳನ್ನು ಅವರು ಮುಟ್ಟುವ ಸಾಧ್ಯತೆಯಿಲ್ಲ."

ಸಶಸ್ತ್ರ ಪಡೆಗಳು, ಗುಪ್ತಚರ, ಪೊಲೀಸ್, ನ್ಯಾಯಾಂಗ, ರೇಡಿಯೋ ಮತ್ತು ಟಿವಿ ಮುಖ್ಯಸ್ಥರು ಮತ್ತು ಗಾರ್ಡಿಯನ್ ಕೌನ್ಸಿಲ್ ಸದಸ್ಯರನ್ನು ನೇಮಿಸುವ ಏಕೈಕ ಅಧಿಕಾರವನ್ನು ಸರ್ವೋಚ್ಚ ನಾಯಕನೇ ಹೊಂದಿರುವುದರಿಂದ ಅಧ್ಯಕ್ಷರ ಕೈಗಳನ್ನು ಕಟ್ಟಿ ಹಾಕಲಾಗಿದೆ ಎಂಬುದು ವಾಸ್ತವ. ಇದಲ್ಲದೆ, ಈ ವರ್ಷದ ಮಾರ್ಚ್​​ನಲ್ಲಿ ಆಯ್ಕೆಯಾದ ಹೊಸ ಸಂಸತ್ತಿನಲ್ಲಿ ಮೂಲಭೂತವಾದಿಗಳು ಬಹುಮತ ಹೊಂದಿದ್ದಾರೆ. ಸುಧಾರಣೆಗಳ ಹಾದಿಯಲ್ಲಿ ಇದು ಪೆಜೆಷ್ಕಿಯಾನ್​ಗೆ ಮತ್ತೊಂದು ತೊಡಕಾಗಲಿದೆ.

ಆದಾಗ್ಯೂ, ಪಾಶ್ಚಿಮಾತ್ಯ ದೇಶಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಇರಾನ್ ಮೇಲೆ ವಿಧಿಸಿದ ನಿರ್ಬಂಧಗಳ ವಿನಾಶಕಾರಿ ಪರಿಣಾಮಗಳನ್ನು ನೋಡಿದರೆ, ಖಮೇನಿ ಹೊಸ ಅಧ್ಯಕ್ಷರಿಗೆ ಜೆಸಿಪಿಒಎ ಪುನರುಜ್ಜೀವನಕ್ಕಾಗಿ ಮಾತುಕತೆ ನಡೆಸಲು ಸಣ್ಣ ಅವಕಾಶ ನೀಡಬಹುದು. ಆದರೆ, ಅಮೆರಿಕದೊಂದಿಗೆ ಬಾಂಧವ್ಯ ವೃದ್ಧಿಗೆ ಖಮೇನಿ ಪೆಜೆಶ್ಕಿಯಾನ್​ಗೆ ಒಂದಿಷ್ಟು ಅವಕಾಶ ನೀಡಿದರೂ ಆ ಪ್ರಯತ್ನಗಳಿಂದ ಯಾವುದೇ ಫಲಪ್ರದ ಫಲಿತಾಂಶ ಸಿಗುವ ಸಾಧ್ಯತೆಗಳಿಲ್ಲ. ಇರಾನ್ ಈಗಾಗಲೇ ಸುಮಾರು ಶೇ 90ರಷ್ಟು ಯುರೇನಿಯಂ ಸಮೃದ್ಧಿಯನ್ನು ಸಾಧಿಸಿದೆ ಎಂಬುದು ಜಗತ್ತಿಗೆ ತಿಳಿದಿದೆ. ಇದು ಪರಮಾಣು ಬಾಂಬ್ ಅನ್ನು ಉತ್ಪಾದಿಸಲು ಸಾಕಾಗುತ್ತದೆ. ಹೀಗಾಗಿ ಜೆಸಿಪಿಒಎಯ ಉದ್ದೇಶವೇ ಈಗ ನಿಷ್ಪ್ರಯೋಜಕವಾಗಿದೆ.

ಅಮೆರಿಕದಲ್ಲಿ ಈ ವರ್ಷದ ಕೊನೆಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಬೈಡನ್ ಆಡಳಿತ ಒತ್ತಡದಲ್ಲಿದೆ. ಮಧ್ಯಪ್ರಾಚ್ಯದಲ್ಲಿ ತನಗೆ ಯಾವುದೇ ಲಾಭವಾಗದಿದ್ದರೆ ಅಂಥ ಪರಿಸ್ಥಿತಿಯಲ್ಲಿ ಇರಾನ್ ಜೊತೆಗೆ ಸಂಬಂಧ ಸುಧಾರಣೆಗೆ ಈ ಹಂತದಲ್ಲಿ ಬೈಡನ್ ಆಡಳಿತ ಮುಂದಾಗುವುದು ಅನುಮಾನ.

ಚೀನಾ, ರಷ್ಯಾ, ಸೌದಿ ಅರೇಬಿಯಾ, ಯುಎಇ, ವೆನೆಜುವೆಲಾ ಸೇರಿದಂತೆ ಅನೇಕ ದೇಶಗಳು ಈ ಚುನಾವಣೆಯನ್ನು ಬಹು-ಧ್ರುವೀಯತೆಯ ಗೆಲುವು ಎಂದು ಶ್ಲಾಘಿಸಿವೆ ಮತ್ತು ಇರಾನ್​ನೊಂದಿಗೆ ಪ್ರಾದೇಶಿಕ ಶಾಂತಿಗಾಗಿ ಕೆಲಸ ಮಾಡಲು ಬದ್ಧವಾಗಿರುವುದಾಗಿ ಹೇಳಿವೆ. ಇರಾಕ್​ನಂಥ ಕೆಲ ದೇಶಗಳು ಈ ಚುನಾವಣೆಗೆ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದು, ಅಭಿನಂದನಾ ಸಂದೇಶಗಳಿಗೆ ಮಾತ್ರ ಅವು ಸೀಮಿತವಾಗಿವೆ.

ಮಧ್ಯಪ್ರಾಚ್ಯದ ಇತರ ಪ್ರಮುಖ ದೇಶಗಳಾದ ಈಜಿಪ್ಟ್ ಮತ್ತು ಜೋರ್ಡಾನ್​ನಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇರಾನ್​ನಲ್ಲಿ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಯುಎಸ್ ವಿದೇಶಾಂಗ ಕಚೇರಿ ಹೇಳಿದೆ. ಅಲ್ಲದೇ ಚುನಾವಣಾ ಫಲಿತಾಂಶಗಳು ಇರಾನ್​ ಕುರಿತಾದ ತಮ್ಮ ದೃಷ್ಟಿಕೋನದ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಹೇಳಿದೆ.

ಇನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇರಾನ್​ನ ನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದು, ನಮ್ಮ ಜನರು ಮತ್ತು ಪ್ರದೇಶದ ಪ್ರಯೋಜನಕ್ಕಾಗಿ ಆತ್ಮೀಯ ಮತ್ತು ದೀರ್ಘಕಾಲೀನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಪೆಜೆಶ್ಕಿಯಾನ್ ಅವರ ಆಯ್ಕೆಯು ಭಾರತ-ಇರಾನ್ ಸಂಬಂಧಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ನೋಡಬೇಕಾಗುತ್ತದೆ. ಚಬಹಾರ್ ಬಂದರಿನ ನಿರ್ವಹಣೆಯ ಬಗ್ಗೆ ಸಾಂದರ್ಭಿಕ ತಪ್ಪು ತಿಳಿವಳಿಕೆಗಳನ್ನು ಹೊರತುಪಡಿಸಿ ನಾವು ಈಗಾಗಲೇ ಇರಾನ್ ನೊಂದಿಗೆ ಸ್ಥಿರ ಹಾಗೂ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಚಬಹಾರ್-ಜಹೇದಾನ್ ರೈಲು ಯೋಜನೆಯಲ್ಲಿ ಭಾಗವಹಿಸಲು ಭಾರತ ಇತ್ತೀಚೆಗೆ ಮತ್ತೆ ಆಸಕ್ತಿ ತೋರಿಸಿದೆ.

ಆದಾಗ್ಯೂ, ಹೊಸ ಇರಾನಿನ ಅಧ್ಯಕ್ಷರು ಜೆಸಿಪಿಒಎಯನ್ನು ಪುನರುಜ್ಜೀವನಗೊಳಿಸುವ ಮೂಲಕ ಇರಾನ್ ಅನ್ನು ಪ್ರತ್ಯೇಕತೆಯಿಂದ ಹೊರತರುವಲ್ಲಿ ಯಶಸ್ವಿಯಾದರೆ, ಅದು ನಿರ್ಬಂಧಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಇರಾನ್​ನಿಂದ ಭಾರತಕ್ಕೆ ಮತ್ತೆ ಕಚ್ಚಾ ತೈಲದ ಪೂರೈಕೆ ಆರಂಭವಾಗಬಹುದು. ಇರಾನ್ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳಿಗೆ ಮೊದಲು, ಇದು ಭಾರತಕ್ಕೆ ಪ್ರಮುಖ ಮತ್ತು ಕೆಲವೊಮ್ಮೆ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾಗಿತ್ತು ಎಂಬುದು ಗಮನಾರ್ಹ.

ಇದು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಂದಿಗಿನ ನಮ್ಮ ವ್ಯಾಪಾರಕ್ಕೆ ನಿರ್ಣಾಯಕವಾದ ಇರಾನ್​ನಲ್ಲಿ ಹೆಚ್ಚಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡಲು ದಾರಿ ಮಾಡಿಕೊಡುತ್ತದೆ. ಇದಲ್ಲದೆ, ಇರಾನ್-ಪಾಕಿಸ್ತಾನ-ಭಾರತ ಅನಿಲ ಪೈಪ್ ಲೈನ್ ಅನ್ನು ಪುನರುಜ್ಜೀವನಗೊಳಿಸಲು ಮತ್ತು ಒಟ್ಟು 2,755 ಕಿ.ಮೀ ಉದ್ದದ ಯೋಜನೆಯಲ್ಲಿ ನಿರ್ಮಾಣದ ಭಾಗವನ್ನು (781 ಕಿ.ಮೀ) ಪೂರ್ಣಗೊಳಿಸಲು ಪಾಕಿಸ್ತಾನದ ಮೇಲೆ ಒತ್ತಡವನ್ನು ಹೆಚ್ಚಿಸಲು ಇರಾನ್​ಗೆ ಮನವರಿಕೆ ಮಾಡಲು ಇದು ನಮಗೆ ಅವಕಾಶ ನೀಡುತ್ತದೆ. ನಾವು ಈ ಯೋಜನೆಗೆ ಮತ್ತೆ ಸೇರಿದರೆ ಮತ್ತು ಇರಾನ್ ಪಾಕಿಸ್ತಾನವನ್ನು ತನ್ನ ಬದ್ಧತೆಯನ್ನು ಪೂರೈಸುವಂತೆ ಮಾಡಿದರೆ, ನಮ್ಮ ಇಂಧನ ಸಮಸ್ಯೆಗಳು ಗಮನಾರ್ಹವಾಗಿ ಕಡಿಮೆಯಾಗಲಿವೆ.

ಅಂತಿಮವಾಗಿ ಇರಾನ್​ನ ಹೊಸ ಆಡಳಿತವು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಹೊಂದಾಣಿಕೆಗೆ ಎಷ್ಟರ ಮಟ್ಟಿಗೆ ಸಿದ್ಧವಾಗಿದೆ ಮತ್ತು ಇರಾನ್​ನ ಕ್ರಿಯೆಗಳಿಗೆ ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಸೌದಿ ಅರೇಬಿಯಾವು ತನ್ನ ಹೊಸ ಮಿತ್ರ ಇರಾನ್​ ಮತ್ತು ಹಳೆಯ ಮಿತ್ರ ಅಮೆರಿಕಗಳ ಮಧ್ಯೆ ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯವೂ ಈ ಸಂದರ್ಭದಲ್ಲಿ ಮುಖ್ಯವಾಗಿದೆ.

ಲೇಖನ: ಜಿತೇಂದ್ರ ಕುಮಾರ್ ತ್ರಿಪಾಠಿ

ಇದನ್ನೂ ಓದಿ : ರಷ್ಯಾ - ಭಾರತದ ಸಂಬಂಧ ವೃದ್ಧಿಯಲ್ಲಿ ಬಾಲಿವುಡ್​ ಸಿನಿಮಾಗಳ ಪಾತ್ರವೂ ಇದೆ: ಪ್ರಧಾನಿ ಮೋದಿ - modi talks bollywood cinima

ABOUT THE AUTHOR

...view details