ಕರ್ನಾಟಕ

karnataka

ETV Bharat / international

ಮಾನವ ಹಕ್ಕುಗಳಿಗೋಸ್ಕರ ಎತ್ತಿದ ಕೈಗೆ ಕೋಳ ತೊಡಿಸಿದ ಪಾಕ್‌ ಪೊಲೀಸರು; ಇದಕ್ಕಿದೆ ಕಾಶ್ಮೀರದ ಲಿಂಕು!

ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತೆ ಇಮಾನ್ ಝೈನಬ್ ಮಜಾರಿ ಅವರನ್ನು ಬಂಧಿಸಲಾಗಿದೆ.

ಮಾನವ ಹಕ್ಕುಗಳ ವಕೀಲೆ ಇಮಾನ್ ಝೈನಬ್ ಮಜಾರಿ
ಮಾನವ ಹಕ್ಕುಗಳ ವಕೀಲೆ ಇಮಾನ್ ಝೈನಬ್ ಮಜಾರಿ (IANS)

By ETV Bharat Karnataka Team

Published : 4 hours ago

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸಚಿವೆ ಶಿರೀನ್ ಮಜಾರಿ ಅವರ ಪುತ್ರಿ, ದೇಶದ ಖ್ಯಾತ ಮಾನವ ಹಕ್ಕುಗಳ ವಕೀಲೆ ಇಮಾನ್ ಝೈನಬ್ ಮಜಾರಿ-ಹಝೀರ್ ಹಾಗೂ ಅವರ ಪತಿಯನ್ನು ಇಸ್ಲಾಮಾಬಾದ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಕಳೆದ ವಾರ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರವಾಸದ ವೇಳೆ ಭದ್ರತಾ ಅಪಾಯ ಸೃಷ್ಟಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

"ಇಮಾನ್ ಮಜಾರಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ. ದೇಶದಲ್ಲಿ ಸಂಪೂರ್ಣ ಫ್ಯಾಸಿಸಂ ಆಡಳಿತ ನಡೆಯುತ್ತಿದೆ. ಇಸ್ಲಾಮಾಬಾದ್ ಪೊಲೀಸರ ಕ್ರಮ ನಾಚಿಕೆಗೇಡು ಮತ್ತು ಹೇಡಿತನದ್ದು" ಎಂದು ತನ್ನ ಮಗಳ ಬಂಧನದ ನಂತರ ಶಿರೀನ್ ಮಜಾರಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದಲ್ಲಿ ಮಾನವ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕಾಗಿ ಇಮಾನ್ ಮಜಾರಿ ಅವರನ್ನು ಬಂಧಿಸಲಾಗಿದೆ ಎಂದು ಅವರ ಹಲವಾರು ಬೆಂಬಲಿಗರು ಆರೋಪಿಸಿದ್ದಾರೆ.

ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಯಾಣಿಸುತ್ತಿರುವ ಸಮಯದಲ್ಲಿ ಪ್ರೋಟೋಕಾಲ್​ಗಳನ್ನು ಜಾರಿಗೆ ತರಲಾಗಿತ್ತು. ಈ ಪ್ರೋಟೋಕಾಲ್​ಗಳನ್ನು ವಿರೋಧಿಸಿ ಅಕ್ಟೋಬರ್ 25 ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನಲ್ಲಿ ಇಮಾನ್ ಮಜಾರಿ ಮತ್ತು ಅವರ ಪತಿ ಟ್ರಾಫಿಕ್ ಪೊಲೀಸರೊಂದಿಗೆ ಜಗಳವಾಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ.

ಕ್ರಿಕೆಟ್ ತಂಡಗಳನ್ನು ಕರೆದೊಯ್ಯುತ್ತಿದ್ದ ವಾಹನಗಳು ರಸ್ತೆಯಲ್ಲಿ ಹೋಗುತ್ತಿರುವ ಸಮಯದಲ್ಲಿ ಶ್ರೀನಗರ ಹೆದ್ದಾರಿ, ಮುರ್ರಿ ರಸ್ತೆ ಮತ್ತು ನೈಂತ್ ಅವೆನ್ಯೂ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಂಚಾರ ನಿರ್ಬಂಧಿಸಿ, ಬೇರೆಡೆಗೆ ತಿರುಗಿಸಲಾಗಿತ್ತು.

ಟ್ರಾಫಿಕ್ ನಿರ್ಬಂಧವಿದ್ದ ಇಸ್ಲಾಮಾಬಾದ್ ಝೀರೋ ಪಾಯಿಂಟ್ ಇಂಟರ್ ಚೇಂಜ್​ನಲ್ಲಿ ಇಮಾನ್ ಝೈನಬ್ ಮಜಾರಿ ಮತ್ತು ಅವರ ಪತಿ ಪೊಲೀಸರೊಂದಿಗೆ ಜಗಳವಾಡಿದ್ದರು. ಈ ಘಟನೆಯ ನಂತರ, ಇವರಿಬ್ಬರೂ ದೇಶದ ಅತಿಥಿಗಳ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಅನ್ನು ಉಲ್ಲಂಘಿಸುವ ಮೂಲಕ ಸರ್ಕಾರದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಮತ್ತು ದೇಶದ ಅತಿಥಿಗಳ ಸುರಕ್ಷತೆಗೆ ಅಪಾಯ ಉಂಟು ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಸ್ಥಳೀಯ ಪೊಲೀಸರು ಉದ್ದೇಶಪೂರ್ವಕವಾಗಿ ತಾವು ಸಾಗುತ್ತಿದ್ದ ರಸ್ತೆಯ ಮಧ್ಯೆ ಬ್ಯಾರಿಕೇಡ್ ಎಳೆದು ತಂದರು ಎಂದು ಶಿರೀನ್ ಮಜಾರಿ ಸೋಮವಾರ ಆರೋಪಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಇಸ್ಲಾಮಾಬಾದ್‌ನಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನಿಂದ ಅಪಹರಿಸಲ್ಪಟ್ಟ ಕಾಶ್ಮೀರಿ ಪತ್ರಕರ್ತ ಮತ್ತು ಕವಿ ಅಹ್ಮದ್ ಫರ್ಹಾದ್ ಅವರ ಪರವಾಗಿ ನ್ಯಾಯಾಲಯದಲ್ಲಿ ಇಮಾನ್ ಮಜಾರಿ ವಾದ ಮಂಡಿಸಿದ್ದರು. ಇಮಾನ್ ಝೈನಬ್ ಮಜಾರಿ ಅವರ ತಾಯಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಹಿರಿಯ ನಾಯಕಿ ಶಿರೀನ್ ಮಜಾರಿ ಅವರನ್ನು ಹಲವಾರು ಪ್ರತಿಭಟನೆಯ ಸಂದರ್ಭಗಳಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ : ರಷ್ಯಾ - ಉಕ್ರೇನ್ ಯುದ್ಧ ತಡೆಯುವ ಶಕ್ತಿ ಭಾರತದ ಪ್ರಧಾನಿ ಮೋದಿಗೆ ಇದೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ABOUT THE AUTHOR

...view details