ಇಸ್ಲಾಮಾಬಾದ್(ಪಾಕಿಸ್ತಾನ):ಪಾಕಿಸ್ತಾನದ ಎರಡು ಪ್ರಮುಖ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಂತಿಮವಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಒಪ್ಪಂದಕ್ಕೆ ಬಂದಿವೆ. ಈ ಸಂಬಂಧ ನಡೆದ ಹಲವು ಸುತ್ತುಗಳ ಮಾತುಕತೆ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ.
ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರದೇ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಅನಿವಾರ್ಯತೆ ತಲೆದೋರಿದೆ. 266 ಸ್ಥಾನಗಳ ಪಾಕಿಸ್ತಾನ ಸಂಸತ್ಗೆ ನಡೆದ ಚುನಾವಣೆಯಲ್ಲಿ ಪಿಟಿಐ ಅಂದರೆ ಇಮ್ರಾನ್ ಖಾನ್ ನೇತೃತ್ವದ ಪಕ್ಷದ ಬೆಂಬಲಿತ ಅಭ್ಯರ್ಥಿಗಳು 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಿಎಂಎಲ್ಎನ್ 79 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇನ್ನು ಅಸೀಫ್ ಸಲಿ ಜರ್ದಾರಿ ನೇತೃತ್ವದ ಪಿಪಿಸಿ ಪಕ್ಷ 54 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಹೀಗಾಗಿ ಪಾಕಿಸ್ತಾನದಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿತ್ತು.
ಹೀಗಾಗಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಪಿಎಂಎಲ್ಎನ್ ಪಕ್ಷ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜತೆ ಸರ್ಕಾರ ರಚನೆಯ ಮಾತುಕತೆ ನಡೆಸಿತ್ತು. ಹಲವು ದಿನಗಳ ಬಳಿಕ ಮಾತುಕತೆ ಅಂತಿಮ ಹಂತಕ್ಕೆ ತಲುಪಿದ್ದು, ಪಾಕಿಸ್ತಾನದಲ್ಲಿ ಸ್ಥಿರ ಸರ್ಕಾರ ಹಾಗೂ ದೇಶದಲ್ಲಿ ತಲೆ ದೋರಿರುವ ಆರ್ಥಿಕ ಹಿಂಜರಿತ ಹಾಗೂ ತ್ರಿಶಂಕು ಸ್ಥಿತಿಯನ್ನು ಕೊನೆಗಾಣಿಸಲು ಉಭಯ ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ಮುಂದಾಗಿದ್ದು, ಶಹಬಾಜ್ ಷರೀಫ್ ಅವರು ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲು ಹಸಿರು ನಿಶಾನೆ ತೋರಿಸಲಾಗಿದೆ.