ಇಸ್ಲಾಮಾಬಾದ್ (ಪಾಕಿಸ್ತಾನ):ರಾಜಕೀಯ ಅನಿಶ್ಚಿತತೆ, ಆರ್ಥಿಕ ಬಿಕ್ಕಟ್ಟು, ಹಿಂಸಾಚಾರ ಮತ್ತು ಭಯೋತ್ಪಾದಕ ದಾಳಿ ಸವಾಲುಗಳ ನಡುವೆ ಇಂದು ಪಾಕಿಸ್ತಾನ ಸಂಸತ್ತಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಜನರು ಮತದಾನ ಮಾಡಲು ಹೊರಬರುತ್ತಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷವು ಸದ್ಯ ಟ್ರೆಂಡಿಂಗ್ನಲ್ಲಿದೆ.
ರಾಷ್ಟ್ರವ್ಯಾಪಿ ನಡೆಯುವ ಮತದಾನದ ವೇಳೆ ಯಾವುದೇ ದುಷ್ಕೃತ್ಯಗಳು ನಡೆಯದಂತೆ ತಡೆಯಲು, ಭದ್ರತಾ ವ್ಯವಸ್ಥೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಪಾಕಿಸ್ತಾನದ ಆಂತರಿಕ ಸಚಿವಾಲಯವು ಕಂಟ್ರೋಲ್ ರೂಮ್ ಸ್ಥಾಪಿಸಿದೆ. ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನ ನಾಯಕ ನವಾಜ್ ಷರೀಫ್ ಅವರು ನಾಲ್ಕನೇ ಬಾರಿಗೆ ಪ್ರಧಾನಿಯಾಗಲು ಕಣಕ್ಕಿಳಿದಿದ್ದಾರೆ. ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಗಡಿಪಾರಾಗಿದ್ದ ಷರೀಫ್ ಈಚೆಗಷ್ಟೆ ಪಾಕಿಸ್ತಾನಕ್ಕೆ ವಾಪಸ್ ಆಗಿದ್ದರು. ಬಳಿಕ ಕೋರ್ಟ್, ಮಾಜಿ ಪ್ರಧಾನಿ ಮೇಲಿದ್ದ ಬಹುಪಾಲು ಶಿಕ್ಷೆಗಳನ್ನು ರದ್ದುಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು.
ಖಾನ್ಗೆ ನೂರೆಂಟು ತೊಡಕು:ಮತ್ತೊಂದೆಡೆ, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಸಂಸ್ಥಾಪಕ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ಇಮ್ರಾನ್ ಖಾನ್, ಅನೇಕ ಆರೋಪಗಳ ಮೇಲೆ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಸೈಫರ್ ಕೇಸ್ನಲ್ಲಿ 10 ವರ್ಷ, ತೋಷಖಾನಾ ಪ್ರಕರಣದಲ್ಲಿ 14 ವರ್ಷ, ಮತ್ತು ವಿವಾಹ ಪ್ರಕರಣದಲ್ಲಿ 7 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಕ್ರಿಕೆಟಿಗ - ರಾಜಕಾರಣಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಲಾಗಿದೆ. ಅಲ್ಲದೇ, ಪಕ್ಷದ ಚಿಹ್ನೆಯಾದ 'ಬ್ಯಾಟ್' ಅನ್ನು ಹಿಂತೆಗೆದುಕೊಳ್ಳುವ ಪಾಕಿಸ್ತಾನದ ಚುನಾವಣಾ ಆಯೋಗದ ನಿರ್ಧಾರವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದು ಮಾಜಿ ಪ್ರಧಾನಿ ಖಾನ್ಗೆ ಚುನಾವಣೆಗೂ ಮೊದಲು ತೊಡಕುಂಟು ಮಾಡಿದೆ.