ಲಾಹೋರ್: ಅತಿಥಿಗಳಿಗೆ ಪಾಕಿಸ್ತಾನ ನೀಡುವಷ್ಟು ಆತಿಥ್ಯವನ್ನು ನಾನು ಬೇರೆಲ್ಲೂ ನೋಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಮತ್ತು ಭಾರತದ ಮಾಜಿ ರಾಜತಾಂತ್ರಿಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. "ಪಾಕಿಸ್ತಾನಿಗಳು ಕೆಲವೊಂದು ವಿಷಯಕ್ಕೆ ಪ್ರತಿಕ್ರಿಯಿಸುವುದು ಮಾತ್ರವಲ್ಲದೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ. ನಾವು ಸ್ನೇಹಪರವಾಗಿದ್ದರೆ ಅವರು ನಮ್ಮೊಂದಿಗೆ ಇನ್ನಷ್ಟು ಸ್ನೇಹಪರವಾಗುತ್ತಾರೆ. ಹಾಗೆಯೇ ನಾವು ಅವರನ್ನು ವಿರೋಧಿಸಿದರೆ ಅವರು ಅದಕ್ಕೂ ಹೆಚ್ಚು ನಮ್ಮನ್ನು ವಿರೋಧಿಸುತ್ತಾರೆ" ಎಂಬ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಡಾನ್ ಪತ್ರಿಕೆ ವರದಿ ಮಾಡಿದೆ.
ಲಾಹೋರ್ನ ಅಲ್ಹಮ್ರಾದಲ್ಲಿ ಫೈಜ್ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ 'ಹಿಜ್ರ್ ಕಿ ರಾಖ್, ವಿಸಾಲ್ ಕೇ ಫೂಲ್, ಇಂಡೋ-ಪಾಕ್ ಅಫೇರ್ಸ್' (Hijr Ki Rakh, Visaal Kay Phool, Indo-Pak affairs) ಹೆಸರಿನ ಚರ್ಚಾಕೂಟದಲ್ಲಿ ಅಯ್ಯರ್ ಮಾತನಾಡಿದರು.
ಪ್ರಧಾನಿ ಮೋದಿ ಚುನಾವಣೆಯಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ನಿರಂತರವಾಗಿ ವಿಫಲರಾದರೂ ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಇದು ಮೂರನೇ ಎರಡರಷ್ಟು ಸ್ಥಾನಗಳ ಬಹುಮತ ನೀಡುತ್ತದೆ. ಹೀಗಾಗಿ ಮೂರನೇ ಎರಡರಷ್ಟು ಭಾರತೀಯರು ನಿಮ್ಮ ಕಡೆಗೆ (ಪಾಕಿಸ್ತಾನದ ಕಡೆಗೆ) ಬರಲು ಸಿದ್ಧರಿದ್ದಾರೆ ಎಂದು ಅವರು ಒತ್ತಿ ಹೇಳಿದರು.