ವಾಷಿಂಗ್ಟನ್, ಅಮೆರಿಕ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಹೆಚ್ಚುತ್ತಿರುವ ನಡುವೆ, ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರೊಂದಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸೋಮವಾರ ಮಾತನಾಡಿದ್ದಾರೆ. ಈ ವೇಳೆ ಉಭಯ ನಾಯಕರು ಬಾಂಗ್ಲಾದೇಶದಲ್ಲಿನ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ಸವಾಲಿನ ಅವಧಿಯಲ್ಲಿ ಬಾಂಗ್ಲಾದೇಶದ ನಾಯಕತ್ವ ವಹಿಸಿಕೊಂಡಿರುವುದಕ್ಕೆ ಯೂನಸ್‌ಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸುಲ್ಲಿವಾನ್ ಧನ್ಯವಾದ ಹೇಳಿದ್ದಾರೆ ಎಂದು US ಸರ್ಕಾರ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಮಾನವ ಹಕ್ಕುಗಳ ರಕ್ಷಣೆಯ ಬದ್ಧತೆ : ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರ ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟಣಯಲ್ಲಿ ಹೇಳಲಾಗಿದೆ. ಸುಲ್ಲಿವಾನ್ ಅವರು ಸಮೃದ್ಧ, ಸ್ಥಿರ ಮತ್ತು ಪ್ರಜಾಪ್ರಭುತ್ವ ಪರವಾದ ಬಾಂಗ್ಲಾದೇಶಕ್ಕಾಗಿ ಅಮೆರಿಕ ಬೆಂಬಲ ನೀಡಲಿದೆ ಪುನರುಚ್ಚರಿಸಿದ್ದಾರೆ. ದಕ್ಷಿಣ ಏಷ್ಯಾದ ರಾಷ್ಟ್ರವು ಎದುರಿಸುತ್ತಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ತಮ್ಮ ದೇಶದ ನಿರಂತರ ಬೆಂಬಲ ನೀಡುವುದಾಗಿ ಇದೇ ವೇಳೆ ಸುಲ್ಲಿವಾನ್ ಭರವಸೆ ನೀಡಿದ್ದಾರೆ.
84 ವರ್ಷದ ಯೂನಸ್ ಅವರು ಆಗಸ್ಟ್ 8 ರಂದು ಬಾಂಗ್ಲಾದೇಶದ ಮುಖ್ಯ ಸಲಹೆಗಾರರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ ಉಂಟಾದ ಅತಿದೊಡ್ಡ ಪ್ರತಿಭಟನೆ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಹಿಂಸಾಚಾರ ಹೆಚ್ಚುತ್ತಿದೆ. ದೇವಾಲಯಗಳ ಮೇಲೆ ದಾಳಿಗಳು ಕೂಡಾ ನಡೆಯುತ್ತಿವೆ.
ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಬೈಡನ್: ಬಾಂಗ್ಲಾದೇಶದ ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ದೇಶದ ಮಧ್ಯಂತರ ಸರ್ಕಾರ ಬದ್ಧವಾಗಿರಬೇಕು, ಅಲ್ಪಸಂಖ್ಯಾತರ ಮೇಲೆ ಆಗುವ ದಾಳಿಗೆ ನಿಮ್ಮ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಡಿಸೆಂಬರ್ 13 ರಂದು ಎಚ್ಚರಿಕೆ ನೀಡಿದ್ದರು. ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಭದ್ರತಾ ಪರಿಸ್ಥಿತಿ ಕಷ್ಟಕರವಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಂವಹನ ಸಲಹೆಗಾರ ಜಾನ್ ಕಿರ್ಬಿ ಹೇಳಿದ್ದಾರೆ.
ಏತನ್ಮಧ್ಯೆ, ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ನವದೆಹಲಿಗೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಿರುವುದಾಗಿ ಸೋಮವಾರ ಹೇಳಿದೆ. ಈ ಕ್ರಮವು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹದಗೆಡಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿ; ಪದಚ್ಯುತ ಪ್ರಧಾನಿ ಶೇಖ್ ಹಸೀನಾರನ್ನು ಹಸ್ತಾಂತರಿಸಲು ಭಾರತಕ್ಕೆ ಬಾಂಗ್ಲಾದೇಶ ಕೋರಿಕೆ