ಅಸ್ತಾನಾ(ಕಝಾಕಿಸ್ತಾನ): ರಷ್ಯಾಗೆ ತೆರಳುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನ ತಾಂತ್ರಿಕ ಸಮಸ್ಯೆಯಿಂದ ಕಝಾಕಿಸ್ತಾನದಲ್ಲಿ ಬುಧವಾರ ಪತನಗೊಂಡಿತು. ವಿಮಾನವನ್ನು ಪೈಲಟ್ ತುರ್ತು ಲ್ಯಾಂಡಿಂಗ್ ಮಾಡುವ ವೇಳೆ ನೆಲಕ್ಕೆ ರಭಸವಾಗಿ ಅಪ್ಪಳಿಸಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತು.
ನತದೃಷ್ಟ ವಿಮಾನ ಅಜರ್ಬೈಜಾನ್ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಸಮಸ್ಯೆಗೀಡಾಗಿದೆ. ಕಝಾಕಿಸ್ತಾನದ ಕ್ಯಾಸ್ಪಿಯನ್ ಸಮುದ್ರದ ಸಮೀಪ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಐವರು ಸಿಬ್ಬಂದಿ ಸೇರಿ 67 ಮಂದಿ ಇದ್ದರು ಎಂದು ತಿಳಿದು ಬಂದಿದೆ.
ತುರ್ತು ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡರೂ, ಅಚ್ಚರಿ ರೀತಿಯಲ್ಲಿ 25 ಮಂದಿ ತೀವ್ರ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ವಿಷಯ ತಿಳಿದ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ದುರಂತದಲ್ಲಿ ಬದುಕುಳಿದವರನ್ನು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ರವಾನಿಸಿವೆ.
#Azerbaijan Airlines plane coming from #Baku crashes in Aktau, #Kazakhstan pic.twitter.com/bPQer1RnUL
— White Vador ➿ (@AleaJactaEs666) December 25, 2024
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಝಕ್ ಸಾರಿಗೆ ಸಚಿವಾಲಯ, "ಬಾಕುದಿಂದ ರಷ್ಯಾದ ಗ್ರೋಜ್ನಿಗೆ 67 ಜನರನ್ನು ಹೊತ್ತು ಸಾಗುತ್ತಿದ್ದ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ಯಾಸೆಂಜರ್ ವಿಮಾನವು ಪಶ್ಚಿಮ ಕಝಾಕಿಸ್ತಾನದಲ್ಲಿ ಬುಧವಾರ ಪತನಗೊಂಡಿದೆ. ಅಪಘಾತದಲ್ಲಿ 25 ಜನರು ಬದುಕುಳಿದಿದ್ದಾರೆ" ಎಂದು ಮಾಹಿತಿ ನೀಡಿದೆ.
ಕ್ಯಾಸ್ಪಿಯನ್ ಸಮುದ್ರದ ಪೂರ್ವ ತೀರದಲ್ಲಿರುವ ತೈಲ ಮತ್ತು ಅನಿಲ ಸಂಗ್ರಹಗಾರವಾದ ಅಕ್ಟೌದಿಂದ ಮೂರು ಕಿಲೋಮೀಟರ್ ದೂರದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಆಗಿದೆ. ಇದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಅಜರ್‌ಬೈಜಾನ್ ವಿಮಾನಯಾನ ಸಂಸ್ಥೆ ಹೇಳಿದೆ.
ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಬೆಂಕಿ ನಂದಿಸಿದ್ದಾರೆ. ಬದುಕುಳಿದ 25 ಮಂದಿಯಲ್ಲಿ 22 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ತೀವ್ರ ನಿಗಾ ಘಟಕದಲ್ಲಿದ್ದಾರೆ. 14 ಮಂದಿಗೆ ಸಹಜ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಝಕ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆಗಸದಲ್ಲಿ ತೂರಾಡಿದ ವಿಮಾನ: ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಮಸ್ಯೆಗೀಡಾದ ವಿಮಾನವು ಕೆಳಮುಖವಾಗಿ ಚಲಿಸುತ್ತಾ, ತೂರಾಡುತ್ತಿರುವುದು ಕಾಣಬಹುದು. ಬಳಿಕ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ಪಡೆದು, ನಿಧಾನವಾಗಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದ್ದಾರೆ. ನಂತರ ನೆಲಕ್ಕಪ್ಪಳಿಸುವ ಮೂಲಕ ಬೆಂಕಿ ಹೊತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 15 ಮಂದಿ ಸಾವು