ನವದೆಹಲಿ: ಪಾಕಿಸ್ತಾನದ ಅಂತಿಮ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಇದುವರೆಗೂ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಇಮ್ರಾನ್ಖಾನ್ ಅವರ ಪಕ್ಷದ ಬೆಂಬಲಿಗರು 92 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಪಕ್ಷಗಳ ವಿಚಾರಕ್ಕೆ ಬರುವುದಾದರೆ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಪಿಎಂಎಲ್-ಎನ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಿಎಂಎಲ್-ಎನ್, ಬಿಲಾವಲ್ ಭುಟ್ಟೊ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ -ಪಿಪಿಪಿ ಜೊತೆ ಸಮ್ಮಿಶ್ರ ಸರ್ಕಾರ ರಚಿಸಲು ಮಾತುಕತೆ ನಡೆಸುತ್ತಿದೆ.
ಫೆಬ್ರವರಿ 8 ರಂದು ಮತದಾನ ನಡೆದಾಗಿನಿಂದ ಕೆಲವು ದಿನಗಳ ವಿಳಂಬದ ನಂತರ ಅಂತಿಮವಾಗಿ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ -ಪಿಟಿಐ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಪಾಕಿಸ್ತಾನದ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ - ಅಂಶಗಳ ಪ್ರಕಾರ, ಪಿಟಿಐ ಬೆಂಬಲಿತ ಸ್ವತಂತ್ರರು ಪಾಕಿಸ್ತಾನ ಸಂಸತ್ನ ಒಟ್ಟು 266 ಸ್ಥಾನಗಳಲ್ಲಿ 92, PML-N 75 ಮತ್ತು PPP 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಪಾಕಿಸ್ತಾನ ಸೇನೆ ಹಾಗೂ ಇಮ್ರಾನ್ಖಾನ್ ನಡುವೆ ತೀವ್ರವಾದ ಭಿನ್ನಮತವಿದೆ. ಹೀಗಾಗಿ ಇಮ್ರಾನ್ ಖಾನ್ ಪಾಕ್ನಲ್ಲಿ ಅಧಿಕಾರಕ್ಕೆ ಬರುವುದು ಬೇಡವಾಗಿದೆ. ಇನ್ನು ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ಖಾನ್ ನೇತೃತ್ವದ ಪಿಟಿಐಗೆ ಈ ಹಿಂದೆ ಇದ್ದ ಚಿನ್ಹೆ ಕ್ರಿಕೆಟ್ ಬ್ಯಾಟ್ ಅನ್ನು ನೀಡಲು ನಿರಾಕರಿಸಿತು. ಮತ್ತೊಂದು ಕಡೆ ಇಮ್ರಾನ್ ಖಾನ್ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದಾರೆ. ಹೀಗಾಗಿ ಅವರನ್ನು ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಲಾಗಿದೆ.
ಇಮ್ರಾನ್ ಖಾನ್ ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಅವರ ಬೆಂಬಲಿಗರು ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸೇನೆಗೆ ಸೆಡ್ಡು ಹೊಡೆದಿದ್ದಾರೆ. ಮತ್ತೊಂದು ಕಡೆ ಪಿಟಿಐ ಪಕ್ಷದ ಹಿರಿಯ ನಾಯಕ ಗೋಹರ್ ಅಲಿ ಖಾನ್ ಮಾತನಾಡಿ, ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ವಂತ ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದಾರೆ. ನಾವು ಪಿಎಂಎಲ್-ಎನ್ ಅಥವಾ ಪಿಪಿಪಿಯೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.