ಇಸ್ಲಾಮಾಬಾದ್: ನೈಋತ್ಯ ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿಗೆ ಕನಿಷ್ಠ ಏಳು ಜನ ಬಲಿಯಾಗಿದ್ದಾರೆ. ನಿದ್ರೆಯಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ಜನಾಂಗೀಯ ಭಯೋತ್ಪಾದನೆ ಘಟನೆ ಇದಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪಾಕಿಸ್ತಾನದ ರಾಜಕೀಯ ಮಿತ್ರ ಚೀನಾ ಆಳ ಸಮುದ್ರ ಬಂದರನ್ನು ನಿರ್ಮಿಸುತ್ತಿರುವ, ಯಾವಾಗಲೂ ಪ್ರಕ್ಷುಬ್ಧವಾಗಿರುವ ಕರಾವಳಿ ಪಟ್ಟಣ ಗ್ವಾದರ್ನಲ್ಲಿ ಈ ದಾಳಿ ನಡೆದಿದೆ. ಗ್ವಾದಾರ್ ಬಂದರು ಯೋಜನೆಗೆ ಸ್ಥಳೀಯ ಜನರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಮೃತರು ಮಧ್ಯ ಪಂಜಾಬ್ ಪ್ರಾಂತ್ಯದವರಾಗಿದ್ದು ಪಟ್ಟಣದಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿದ್ದರು ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೊಹ್ಸಿನ್ ಅಲಿ ತಿಳಿಸಿದ್ದಾರೆ. ಸುಮಾರು ಮೂರು ವಾರಗಳಲ್ಲಿ ಬಲೂಚಿಸ್ತಾನದ ಉಗ್ರಗಾಮಿ ಪೀಡಿತ ಪ್ರಾಂತ್ಯದಲ್ಲಿ ಪಂಜಾಬಿನ ಜನರ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ಕಳೆದ ತಿಂಗಳು ಉಗ್ರರು ಒಂಬತ್ತು ಬಸ್ ಪ್ರಯಾಣಿಕರನ್ನು ಇಳಿಸಿ ಮರಣದಂಡನೆ ಶೈಲಿಯ ಗುಂಡಿನ ದಾಳಿಯಲ್ಲಿ ಅವರನ್ನು ಹತ್ಯೆ ಮಾಡಿದ್ದರು.
ಪ್ರಾಂತ್ಯದಲ್ಲಿ ಚೀನಾದ ಹೂಡಿಕೆಗಳಿಂದ ನಿರ್ಮಾಣವಾಗುತ್ತಿರುವ ಯೋಜನೆಗಳನ್ನು ವಿರೋಧಿಸುವ ರಾಷ್ಟ್ರೀಯವಾದಿ ಉಗ್ರಗಾಮಿ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ಕಳೆದ ತಿಂಗಳ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಗುಪ್ತಚರ ಇಲಾಖೆಯ ಗೂಢಚಾರರನ್ನು ಹತ್ಯೆ ಮಾಡಿರುವುದಾಗಿ ಬಿಎಲ್ಎ ಆಗ ಹೇಳಿಕೊಂಡಿತ್ತು.