ಸಿಯೋಲ್: ಉತ್ತರ ಕೊರಿಯಾವು, ಕೊರಿಯನ್ ಪೆನಿನ್ಸುಲಾದ ಪೂರ್ವ ಕರಾವಳಿಯ ಸಮುದ್ರದ ಕಡೆಗೆ ಅಜ್ಞಾತ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದ್ದು, ಅದು ಬಹುತೇಕ ವಿಫಲವಾಗಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ಬುಧವಾರ ತಿಳಿಸಿದೆ.
ಬುಧವಾರ ಬೆಳಗ್ಗೆ 5.30ರ ಸುಮಾರಿಗೆ ಉತ್ತರ ಕೊರಿಯಾ ತನ್ನ ರಾಜಧಾನಿ ಪ್ರದೇಶದಿಂದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾವಣೆ ಮಾಡಿದೆ. ಕ್ಷಿಪಣಿಯನ್ನು ಉತ್ತರ ಪೂರ್ವದ ಕರಾವಳಿ ಸಮುದ್ರದ ಕಡೆಗೆ ಉಡಾಯಿಸಲಾಗಿದೆ. ಆದರೆ ಆ ಉಡಾವಣೆ ಬುಹುತೇಕ ವಿಫಲವಾಗಿದೆ ಎಂದು ಶಂಕಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.
ಉತ್ತರ ಕೊರಿಯಾದ ಕ್ಷಿಪಣಿ ನೆಲದ ಮೇಲೆ ಅಪ್ಪಳಿಸಿರಬಹುದು ಅಥವಾ ಗಾಳಿಯಲ್ಲಿ ಸ್ಫೋಟಗೊಂಡಿದೆಯೇ ಎನ್ನುವುದರ ಬಗ್ಗೆ ಹೆಚ್ಚಿನ ವಿವರಗಳನ್ನು ಅದು ನೀಡಿಲ್ಲ. ಆದರೆ, ಜಪಾನ್ ರಕ್ಷಣಾ ಸಚಿವಾಲಯ, ಉತ್ತರ ಕೊರಿಯಾದ ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ಪತ್ತೆ ಮಾಡಿರುವುದಾಗಿ ಬುಧವಾರ ತಿಳಿಸಿದೆ. ಈ ಕ್ಷಿಪಣಿಯು ಸುಮಾರು 100 ಕಿ.ಮೀ. ಎತ್ತರಕ್ಕೆ ಹಾಗೂ 200 ಕಿ.ಮೀಗೂ ಹೆಚ್ಚು ವ್ಯಾಪ್ತಿಯವರೆಗೆ ಹಾರಿದೆ ಎಂದು ಜಪಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ವಾರದ ಆರಂಭದಲ್ಲಿ ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಜಪಾನ್ನೊಂದಿಗೆ ತ್ರಿಪಕ್ಷೀಯ ಸಮರಾಭ್ಯಾಸಕ್ಕೆ ಅಮೆರಿಕ ವಿಮಾನವಾಹಕ ನೌಕೆಯನ್ನು ನಿಯೋಜನೆ ಮಾಡಿದ್ದ ಕುರಿತು ಟೀಕೆ ಮಾಡಿತ್ತು. ಜೊತೆಗೆ ಪ್ರತಿಬಂಧದ ಹೊಸ ಪ್ರದರ್ಶನ ಎಂದು ಎಚ್ಚರಿಕೆ ನೀಡಿತ್ತು.
ಮತ್ತೆ ತನ್ನ ಚಾಳಿ ಮುಂದುವರಿಸಿರುವ ಉತ್ತರ ಕೊರಿಯಾವು ಸತತ ಎರಡನೇ ದಿನವೂ ದಕ್ಷಿಣ ಕೊರಿಯಾದ ಗಡಿ ಉದ್ದಕ್ಕೂ ಕಸ ತುಂಬಿದ್ದ ಬೃಹತ್ ಬಲೂನ್ಗಳನ್ನು ತೇಲಿಬಿಟ್ಟಿತ್ತು. ಈ ಬಗ್ಗೆ ದಕ್ಷಿಣ ಕೊರಿಯಾ ಟೀಕಿಸಿದ ಬೆನ್ನಲ್ಲೇ ಉತ್ತರ ಕೊರಿಯಾ, ಕ್ಷಿಪಣಿ ಉಡಾವಣೆ ಮಾಡಿರುವ ಬಗ್ಗೆ ಮಾಹಿತಿ ನೀಡಿದೆ. ಅದಲ್ಲದೇ ಮಂಗಳವಾರವಷ್ಟೇ ಕೊರಿಯನ್ ಯುದ್ಧ ಪ್ರಾರಂಭದ 74ನೇ ವರ್ಷದ ವಾರ್ಷಿಕೋತ್ಸವದ ನೆನಪಿಗಾಗಿ ಪ್ಯೋಂಗ್ಯಾಂಗ್ನಲ್ಲಿ ಸಾಮೂಹಿಕ ರ‍್ಯಾಲಿ ನಡೆಸಲಾಯಿತು. 'ಅಮೆರಿಕದ ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟದ ದಿನ' ಎಂದು ಇದನ್ನು ಉತ್ತರ ಕೊರಿಯಾ ಕರೆದಿದೆ. ಇದಾದ ಒಂದು ದಿನದಲ್ಲೇ ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿದೆ.
ಇದನ್ನೂ ಓದಿ:ಕಸ, ಕರಪತ್ರ ರವಾನೆ ನಿಲ್ಲಿಸದಿದ್ದರೆ ಪ್ರತಿದಾಳಿ; ದಕ್ಷಿಣ ಕೊರಿಯಾಗೆ ಕಿಮ್ ಸಹೋದರಿ ವಾರ್ನಿಂಗ್ - North Korea warns South Korea