ಢಾಕಾ(ಬಾಂಗ್ಲಾದೇಶ):ವಿದ್ಯಾರ್ಥಿಗಳ ದಂಗೆಯಿಂದ ಅರಾಜಕತೆಯ ತಾಣವಾಗಿರುವ ಬಾಂಗ್ಲಾದೇಶದ ಹಂಗಾಮಿ ಪ್ರಧಾನಿಯಾಗಿ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತೊಡಗೋಣ ಎಂದು ಅವರು ಕರೆ ನೀಡಿದರು.
ಢಾಕಾದಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಗಳ ರಾಜತಾಂತ್ರಿಕರು, ಸಮಾಜದ ಗಣ್ಯರು, ಉದ್ಯಮಿಗಳು ಮತ್ತು ಪ್ರತಿಪಕ್ಷದ ಸದಸ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ಸಮಾನವಾದ ಮುಖ್ಯಸ್ಥರ ಸ್ಥಾನ ಅಲಂಕರಿಸುತ್ತಿರುವ ಮುಹಮ್ಮದ್ ಯೂನಸ್‌ಗೆ ಪ್ರಮಾಣ ವಚನ ಬೋಧಿಸಿದರು.
ಅವಾಮಿ ಲೀಗ್ ಪಕ್ಷದ ನಾಯಕರು ಗೈರು: ಕಾರ್ಯಕ್ರಮದಲ್ಲಿ ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಯಾವುದೇ ಪ್ರತಿನಿಧಿಗಳು ಹಾಜರಿರಲಿಲ್ಲ. ವಿದ್ಯಾರ್ಥಿ ಹೋರಾಟದ ಇಬ್ಬರು ಪ್ರಮುಖರು ಸೇರಿ ಹದಿನಾರು ಜನರ ಮಧ್ಯಂತರ ಕ್ಯಾಬಿನೆಟ್ ರಚಿಸಲಾಗುತ್ತಿದೆ. ವಿದ್ಯಾರ್ಥಿ ಮುಖಂಡರು, ಸಮಾಜದ ಪ್ರತಿನಿಧಿಗಳು ಮತ್ತು ಸೇನೆಯ ನಡುವೆ ನಡೆದ ಚರ್ಚೆಯಲ್ಲಿ ಕ್ಯಾಬಿನೆಟ್ ಮುಖ್ಯಸ್ಥರನ್ನಾಗಿ ಯೂನಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಚುನಾಯಿತ ಸರ್ಕಾರ ಪತನ, ಮಧ್ಯಂತರ ಸರ್ಕಾರ ರಚನೆ:ಭಾರತದ ನೆರೆಯ ರಾಷ್ಟ್ರವಾಗಿರುವ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟವು ಹಿಂಸಾತ್ಮಕ ರೂಪ ಪಡೆದು 400ಕ್ಕೂ ಅಧಿಕ ಜನರು ಹತ್ಯೆಯಾಗಿದ್ದಾರೆ. ದೇಶದಲ್ಲಿ ಸಂಭವಿಸಿದ ಕ್ಷಿಪ್ರಕ್ರಾಂತಿಗೆ ಇತ್ತೀಚೆಗಷ್ಟೆ ಚುನಾವಣೆ ನಡೆದು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಸರ್ಕಾರ ಪತನವಾಗಿದೆ. ಪ್ರತಿಭಟನಾಕಾರರ ದಾಳಿಗೆ ಬೆದರಿ ಶೇಕ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿ ದೇಶದಿಂದ ಪರಾರಿಯಾಗಿ ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ಮೂಲಕ ಅವಾಮಿ ಲೀಗ್ ಪಕ್ಷದ 15 ವರ್ಷಗಳ ಆಡಳಿತವೂ ಪತನವಾದಂತಾಗಿದೆ.