ಢಾಕಾ (ಬಾಂಗ್ಲಾದೇಶ):ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ಬಾಂಗ್ಲಾದೇಶದಲ್ಲಿ ಈಗ ಮೊಹಮ್ಮದ್ ಯೂನಸ್ ಹಂಗಾಮಿ ಸರ್ಕಾರದ ನೇತೃತ್ವ ವಹಿಸಲಿದ್ದಾರೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿರುವ ಯೂನಸ್ ಹಂಗಾಮಿ ಪ್ರಧಾನಿಯಾಗಲಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಗಿದ್ದರಿಂದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಬೆಳಗ್ಗೆ ಸಂಸತ್ತನ್ನು ವಿಸರ್ಜಿಸಿದ್ದರು.
ಸಂಸತ್ ವಿಸರ್ಜನೆ ಬಳಿಕ ಉಸ್ತುವಾರಿ ಆಡಳಿತದ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಹೊಸ ಚುನಾವಣೆ ನಡೆಸಲು ಸಹ ಅನುಕೂಲ ಕಲ್ಪಿಸಲಾಗಿದೆ. ಮಂಗಳವಾರ ಮಧ್ಯರಾತ್ರಿ ಯೂನಸ್ ಅವರನ್ನು ಹಂಗಾಮಿ ಸರ್ಕಾರದ ನಾಯಕರನ್ನಾಗಿ ನೇಮಕ ಮಾಡುವುದಾಗಿ ಅಧ್ಯಕ್ಷರು ಘೋಷಿಸಿದ್ದಾರೆ. ನೊಬಲ್ ಪುರಸ್ಕೃತ ಮೊಹಮ್ಮದ್ ಯೂನಸ್ 2012ರಿಂದ 2018 ರವರೆಗೆ ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋ ಕ್ಯಾಲೆಡೋನಿಯನ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಚಿತ್ತಗಾಂಗ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಬಾಂಗ್ಲಾದೇಶದ ಬಡವರ ಉನ್ನತಿಗಾಗಿ ಯೂನಸ್ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು.
ಮೊಹಮ್ಮದ್ ಯೂನಸ್ ಹಿನ್ನೆಲೆ:1940ರಲ್ಲಿ ಚಿತ್ತಗಾಂಗ್‌ನಲ್ಲಿ ಜನಿಸಿದ ಅವರು ಸಾಮಾಜಿಕ ಕಾರ್ಯಕರ್ತ, ಬ್ಯಾಂಕರ್ ಮತ್ತು ಅರ್ಥಶಾಸ್ತ್ರಜ್ಞ. ಕಿರುಬಂಡವಾಳ ಬ್ಯಾಂಕ್ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತಿದ ಕೀರ್ತಿ ಇವರಿಗಿದೆ. ಅದಕ್ಕಾಗಿ ಅವರು 2006ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದಾರೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಯೂನಸ್ ಅವರನ್ನು ಅರಸಿ ಬಂದಿವೆ. ಸಂಸತ್ತನ್ನು ರದ್ದುಪಡಿಸುವುದು ಬಾಂಗ್ಲಾದೇಶದ ಕಾರ್ಯಕರ್ತರ ಪ್ರಮುಖ ಬೇಡಿಕೆಯಾಗಿದೆ. ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಮಿಲಿಟರಿ ಸರ್ಕಾರ ಅಥವಾ ಸೇನೆಯ ಬೆಂಬಲವಿರುವ ಯಾವುದೇ ಸರ್ಕಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಹಸೀನಾ ಸರ್ಕಾರದೊಂದಿಗೆ ಘರ್ಷಣೆ ಮಾಡಿದ್ದಕ್ಕಾಗಿ ಯೂನಸ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು . ಒಂದು ಪ್ರಕರಣದಲ್ಲಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಕೂಡಾ ವಿಧಿಸಲಾಗಿತ್ತು. ತನ್ನ ದೇಶ ಮತ್ತು ಜನರಿಗಾಗಿ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಯೂನಸ್ ಈಗಾಗಲೇ ಘೋಷಿಸಿದ್ದಾರೆ. ದೇಶದಲ್ಲಿ ಮುಕ್ತ ಚುನಾವಣೆ ನಡೆಯಬೇಕು ಎಂದೂ ಅವರು ಕರೆ ನೀಡಿದ್ದಾರೆ.