ಇಸ್ಲಾಮಾಬಾದ್: ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಹೊಸ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ. ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ಸರ್ಕಾರಿ ಉಡುಗೊರೆ ಭಂಡಾರಕ್ಕೆ ಸಂಬಂಧಿಸಿದ ಏಳು ಉನ್ನತ ಮೌಲ್ಯದ ಗಡಿಯಾರಗಳು ಮತ್ತು ಇತರ 10 ಅಮೂಲ್ಯ ಉಡುಗೊರೆಗಳನ್ನು 'ಕಾನೂನುಬಾಹಿರವಾಗಿ' ಇಟ್ಟುಕೊಂಡಿದ್ದಾರೆ ಮತ್ತು ಮಾರಾಟ ಮಾಡಿದ್ದಾರೆ ಎಂದು ಪಾಕಿಸ್ತಾನದ ಉತ್ತರದಾಯಿತ್ವ ಕಾವಲು ಸಂಸ್ಥೆ (Pakistan's accountability watchdog) ಆರೋಪಗಳನ್ನು ಮಾಡಿದೆ ಎಂದು ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.
71 ವರ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ವಿರುದ್ಧ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್ಎಬಿ) ತನಿಖೆಯನ್ನು ಪ್ರಾರಂಭಿಸಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ದೇಶದ ಸರ್ಕಾರಿ ಉಡುಗೊರೆಗಳ ಭಂಡಾರವಾದ ತೋಷಾಖಾನದಲ್ಲಿನ ಉಡುಗೊರೆಗಳನ್ನು ದಂಪತಿಯು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ದೇಶದ ಭಂಡಾರದಿಂದ ಪಡೆದ ಸರ್ಕಾರಿ ಉಡುಗೊರೆಗಳ ವಿಷಯದಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪದ ಮೇಲೆ ಜನವರಿಯಲ್ಲಿ ಖಾನ್ ಮತ್ತು ಬುಶ್ರಾ ಅವರಿಗೆ ಉತ್ತರದಾಯಿತ್ವ ನ್ಯಾಯಾಲಯವು ತಲಾ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ (ಐಎಚ್ ಸಿ) ಅಮಾನತುಗೊಳಿಸಿತು. ಈ ಹಿಂದೆ ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ)ವು ಸರ್ಕಾರಿ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ತೋಷಾಖಾನಾ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿತ್ತು.