ವಿಶ್ವಸಂಸ್ಥೆ(ನ್ಯೂಯಾರ್ಕ್ ಸಿಟಿ): ಸಿರಿಯಾದಲ್ಲಿ ಇತ್ತೀಚಿನ ಯುದ್ಧ ಬಿಕ್ಕಟ್ಟಿನ ಸ್ಥಿತಿಯಿಂದಾಗಿ 8,80,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ. ಸ್ಥಳಾಂತರಗೊಂಡವರಲ್ಲಿ ಸುಮಾರು 6 ಪ್ರತಿಶತದಷ್ಟು ಜನರು ಕನಿಷ್ಠ ಒಂದು ರೀತಿಯ ಅಂಗವೈಕಲ್ಯದೊಂದಿಗೆ ಬದುಕುತ್ತಿದ್ದಾರೆ ಎಂದು ಯುಎನ್ ಕಾರ್ಯಕರ್ತರು ಅಂದಾಜಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಹೊರದೇಶಗಳಲ್ಲಿ ಆಶ್ರಯ ಪಡೆದಿದ್ದ ಸಿರಿಯನ್ನರು ನಿರಂತರವಾಗಿ ಸ್ವದೇಶಕ್ಕೆ ಮರಳುತ್ತಿದ್ದಾರೆ. ಭಾನುವಾರ ಒಂದೇ ದಿನದಲ್ಲಿ 2 ಲಕ್ಷ 20 ಸಾವಿರದಷ್ಟು ಸಿರಿಯನ್ನರು ಸ್ವದೇಶಕ್ಕೆ ಮರಳಿದ್ದಾರೆ" ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ತಿಳಿಸಿದೆ. ಇದಲ್ಲದೆ ಈಶಾನ್ಯ ಸಿರಿಯಾದಾದ್ಯಂತ ಸುಮಾರು 250 ಸಾಮೂಹಿಕ ಕೇಂದ್ರಗಳಲ್ಲಿ 40,000ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರು ವಾಸಿಸುತ್ತಿದ್ದಾರೆ.
ವಿಶ್ವಸಂಸ್ಥೆ ಮತ್ತು ಪಾಲುದಾರರು ಆಹಾರ, ನೀರು, ನಗದು, ಡೇರೆಗಳು ಮತ್ತು ಕಂಬಳಿಗಳನ್ನು ಪೂರೈಸುವ ಮೂಲಕ ನಿರಾಶ್ರಿತರಿಗೆ ನೆರವು ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಕಚೇರಿ ತಿಳಿಸಿದೆ. ವಿಶ್ವಸಂಸ್ಥೆಯು ವೈದ್ಯಕೀಯ ತಂಡಗಳು ಮತ್ತು ವೈದ್ಯಕೀಯ ಸರಬರಾಜುಗಳನ್ನು ಸಹ ನಿಯೋಜಿಸುತ್ತಿದೆ. ಜೊತೆಗೆ, ಬ್ಯಾಕಪ್ ಜನರೇಟರ್ಗಳನ್ನು ಚಾಲನೆಯಲ್ಲಿಡಲು ಇಂಧನವನ್ನು ಸಹ ಪೂರೈಸಲಾಗುತ್ತಿದೆ.
ಸಿರಿಯನ್ ಅರಬ್ ರೆಡ್ ಕ್ರೆಸೆಂಟ್ ಮತ್ತು ಇಂಟರ್ ನ್ಯಾಷನಲ್ ಕಮಿಟಿ ಆಫ್ ದಿ ರೆಡ್ ಕ್ರಾಸ್, ಯುಎನ್ ಚಿಲ್ಡ್ರನ್ಸ್ ಫಂಡ್ (ಯುನಿಸೆಫ್) ಸಹಯೋಗದೊಂದಿಗೆ ಸಿರಿಯಾದ ಅಲೆಪ್ಪೊ ಗವರ್ನರೇಟ್ನಲ್ಲಿರುವ ತಿಶ್ರೀನ್ ಅಣೆಕಟ್ಟು ದುರಸ್ತಿಗೊಳಿಸಲು ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಸಲಾಯಿತು.