ಬ್ಲಾಂಟೈರ್(ಮಲಾವಿ):ಮಲಾವಿ ಸೇನಾ ವಿಮಾನ ಪತನವಾಗಿದ್ದು, ದೇಶದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಹಾಗೂ ಇತರ 9 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಚಿಲಿಮಾ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆ ವೇಳೆ ಇಂದು ವಿಮಾನ ಪತನವಾಗಿರುವುದು ಖಚಿತವಾಗಿದೆ ಎಂದು ಅಧ್ಯಕ್ಷ ಲಾಜರಸ್ ಚಕ್ವೇರಾ ತಿಳಿಸಿದ್ದಾರೆ.
51 ವರ್ಷದ ಚಿಲಿಮಾ ಅವರಿದ್ದ ವಿಮಾನವು ರಾಷ್ಟ್ರ ರಾಜಧಾನಿ ಲಿಲೋಂಗ್ವೆಯಿಂದ ಸೋಮವಾರ ಬೆಳಗ್ಗೆ 9.17ಕ್ಕೆ ಹೊರಟಿತ್ತು. ಸುಮಾರು 45 ನಿಮಿಷಗಳ ನಂತರ, ಅಂದಾಜು 370 ಕಿಲೋಮೀಟರ್ ಕ್ರಮಿಸಿ ಮಜುಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಆದರೆ, ಇದಕ್ಕೂ ಮುನ್ನವೇ ರಾಡಾರ್ ಸಂಪರ್ಕ ಕಳೆದುಕೊಂಡಿತ್ತು. ನಂತರದಲ್ಲಿ ವಿಮಾನವನ್ನು ಸಂಪರ್ಕಿಸುವ ಎಲ್ಲ ಪ್ರಯತ್ನಗಳು ನಡೆಸಲಾಗಿತ್ತು. ಆದರೂ, ಯಾವುದೇ ಸಂಪರ್ಕ ಸಾಧ್ಯವಾಗಿರಲಿಲ್ಲ.
ಚಿಲಿಮಾ ಹೊರಟಿದ್ದ ಮಜುಜು ನಗರವು ಮಲಾವಿಯ ಮೂರನೇ ದೊಡ್ಡ ನಗರ ಮತ್ತು ಉತ್ತರ ಪ್ರಾಂತ್ಯದ ರಾಜಧಾನಿಯಾಗಿದೆ. ಇದು ವಿಫ್ಯಾ ಪರ್ವತ ಶ್ರೇಣಿಗಳ ಗುಡ್ಡಗಾಡು, ಅರಣ್ಯ ಪ್ರದೇಶದಲ್ಲಿದೆ. ಕಣ್ಮರೆಯಾದ ವಿಮಾನ ಪತ್ತೆಗಾಗಿ ಸೈನಿಕರು, ಪೊಲೀಸ್ ಅಧಿಕಾರಿಗಳು, ತಜ್ಞರು ಸೇರಿದಂತೆ 600 ಸಿಬ್ಬಂದಿಯನ್ನೊಳಗೊಂಡ ತಂಡಗಳು ಅರಣ್ಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು.