ಮಾಲೆ (ಮಾಲ್ಡೀವ್ಸ್) :ಭಾರತದ ವಿರುದ್ಧ ತಿರುಗಿಬಿದ್ದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದೆ. ಐಸ್ಲ್ಯಾಂಡ್ಗೆ ತೆರಳುತ್ತಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆ ಭಾರೀ ಕುಸಿತವಾಗಿದೆ. ಇದರಿಂದ ಅಲ್ಲಿಗೆ ತೆರಳುವ ದೇಶಗಳ ಪೈಕಿ ಮೊದಲಿದ್ದ ಭಾರತೀಯರ ಪ್ರಮಾಣ ಈಗ 5ನೇ ಸ್ಥಾನಕ್ಕೆ ಇಳಿದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಕೊಳಚೆ ರಾಷ್ಟ್ರ ಎಂದು ಟೀಕಿಸಿದ ಬಳಿಕ, ಉಭಯ ರಾಷ್ಟ್ರಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ದೇಶವನ್ನು ಟೀಕಿಸಿದ್ದಕ್ಕೆ ಸಿಟ್ಟಾಗಿರುವ ಭಾರತೀಯರು ದ್ವೀಪರಾಷ್ಟ್ರಕ್ಕೆ ಪ್ರವಾಸವನ್ನೇ ಮೊಟಕುಗೊಳಿಸುತ್ತಿದ್ದಾರೆ. ಮಾಲ್ಡೀವ್ಸ್ನ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಜನವರಿಯಲ್ಲಿ 13,989 ಪ್ರವಾಸಿಗರು ಮಾತ್ರ ತೆರಳಿದ್ದಾರೆ. ರಷ್ಯಾ, ಇಟಲಿಯಿಂದ 18 ಸಾವಿರ, ಚೀನಾದಿಂದ 16, ಬ್ರಿಟನ್ನಿಂದ 14 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿ ಮೊದಲಿಗರಾಗಿದ್ದಾರೆ.
ಮೋದಿ, ಭಾರತ ಕ್ಷಮೆ ಕೋರಲು ಆಗ್ರಹ:ಪ್ರವಾಸೋದ್ಯಮದ ತೀವ್ರ ಕುಸಿತ ಮತ್ತು ಸೇನಾ ಪಡೆಯನ್ನು ವಾಪಸ್ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಆತಂಕಕ್ಕೀಡಾಗಿರುವ ಮಾಲ್ಡೀವ್ಸ್ನ ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದ ಜನರ ಕ್ಷಮೆ ಕೋರಲು ಅಧ್ಯಕ್ಷ ಮೊಹಮದ್ ಮುಯಿಝು ಅವರಿಗೆ ಅಲ್ಲಿನ ವಿಪಕ್ಷಗಳು ಸೂಚಿಸಿವೆ.
ಸ್ನೇಹರಾಷ್ಟ್ರವಾಗಿದ್ದ ಭಾರತವನ್ನು ಎದುರು ಹಾಕಿಕೊಂಡಿರುವ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ಮಾಲ್ಡೀವ್ಸ್ ಜುಮ್ಹೂರಿ ಪಾರ್ಟಿಯ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ, ಅಧ್ಯಕ್ಷ ಮುಯಿಝು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಯನ್ನು ಕ್ಷಮೆ ಕೋರಬೇಕು. ಉಭಯ ರಾಷ್ಟ್ರಗಳ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದ್ದಾರೆ.
ಭಾರತ ವಿಶೇಷ ನೆರೆಯ ರಾಷ್ಟ್ರ. ಮುಯಿಜು ಸರ್ಕಾರದ 'ಇಂಡಿಯಾ ಔಟ್' ಅಭಿಯಾನದಿಂದ ದೇಶಕ್ಕೆ ನಷ್ಟವಾಗುತ್ತಿದೆ. ಸರ್ಕಾರಗಳ ಹಿತ ದೇಶ ರಕ್ಷಣೆಯಾಗಿರಬೇಕು. ಒಂದು ರಾಷ್ಟ್ರವು ನೀಡುವ ನೆರವನ್ನು ನಿರಾಕರಿಸಬಾರದು. ಅದರಿಂದ ನಮಗೆ ನಷ್ಟ. ಹೀಗಾಗಿ ನರೇಂದ್ರ ಮೋದಿ ಮತ್ತು ಭಾರತವನ್ನು ಕ್ಷಮೆ ಕೋರಬೇಕು ಎಂದು ಕರೆ ನೀಡಿದ್ದಾರೆ. ಇದರ ನಡುವೆ ವಿಪಕ್ಷಗಳು ನೂತನ ಅಧ್ಯಕ್ಷರನ್ನು ವಜಾ ಮಾಡಲು ಸಹಿ ಸಂಗ್ರಹ ನಡೆಸುತ್ತಿವೆ.
ಭಾರತದ ವಿರುದ್ಧ ಸೆಟೆದು ನಿಂತಿರುವ ಆಡಳಿತ ಪಕ್ಷದ ಸಂಸದರ ವಿರುದ್ಧ ವಿಪಕ್ಷಗಳ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಚೆಗೆ ಸಂಸತ್ತಿನಲ್ಲೇ ಆಡಳಿತ- ವಿಪಕ್ಷ ಸಂಸದರು ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೂತನ ಅಧ್ಯಕ್ಷ ಮುಯಿಜು ಈಚೆಗೆ ಚೀನಾಕ್ಕೆ ಭೇಟಿ ನೀಡಿ ಅಲ್ಲಿಂದಲೇ ಭಾರತದ ವಿರುದ್ಧ ಗುಡುಗಿದ್ದರು. ಚೀನಾದ ರಹಸ್ಯ ಕಾರ್ಯಾಚರಣೆಯ ಹಡಗೊಂದು ಮಾಲ್ಡೀವ್ಸ್‌ಗೆ ಬಂದಿರುವುದು ಭಾರತದ ಆತಂಕವನ್ನು ಹೆಚ್ಚಿಸಿದೆ.
ಇದನ್ನೂ ಓದಿ:ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ವಿರುದ್ಧ ದೋಷಾರೋಪಣಾ ನಿರ್ಣಯ ಮಂಡಿಸಲು ವಿಪಕ್ಷ ಸಿದ್ಧತೆ